ಜಾನುವಾರು ಮೇಳ ಅದ್ದೂರಿ ಆಯೋಜಿಸಿ

pasu vv
Published on

ಬೀದರ್: ನಗರದ ಹೊರವಲಯದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜ.17ರಿಂದ ಮೂರು ದಿನ ಆಯೋಜಿಸಿರುವ ಜಾನುವಾರು, ಕುಕ್ಕುಟ ಮತ್ತು ಮತ್ಸ್ಯ ಮೇಳವನ್ನು ಅದ್ದೂರಿ, ಅರ್ಥಪೂರ್ಣವಾಗಿ ಆಯೋಜನೆ ಮಾಡಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಮೇಳದ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಜಾನುವಾರು ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳ ಪ್ರದರ್ಶನ ನಡೆಯಲಿವೆ. ರೈತರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪಶು ವಿಶ್ವವಿದ್ಯಾಲಯದ 20ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಮೇಳ ಆಯೋಜಿಸಲಾಗಿದೆ. ಗ್ರಾಮೀಣ ಸಮೃದ್ಧಿ ಮತ್ತು ಜೀವನೋಪಾಯ ಭದ್ರತೆಗಾಗಿ ಪಶುಪಾಲನೆ ಮತ್ತು ಮೀನುಗಾರಿಕೆ ಘೋಷವಾಕ್ಯದೊಂದಿಗೆ ಆಯೋಜಿತ ಮೇಳವು ನವೀನ ತಂತ್ರಜ್ಞಾನ ಮತ್ತು ಆಧುನಿಕ ಸಾಕಾಣಿಕೆ ವಿಧಾನಗಳೊಂದಿಗೆ ರೈತರಿಗೆ ಪ್ರೇರಣೆ ನೀಡುವ ಉದ್ದೇಶ ಹೊಂದಿದೆ. 200 ಮಳಿಗೆಗಳಲ್ಲಿ ವೈಜ್ಞಾನಿಕ ಮಾಹಿತಿ, ತಂತ್ರಜ್ಞಾನ ಪ್ರದರ್ಶನ, ರೈತ-ವಿಜ್ಞಾನಿ ಸಂವಾದ, ಹಾಗೂ ಸಾವಯವ ಕೃಷಿ ವಿಧಾನಗಳ ಪ್ರದರ್ಶನ ಇರಲಿವೆ. ಶ್ರೇಷ್ಠ ರೈತರಿಗೆ ಸನ್ಮಾನ, ಚರ್ಚಾ ಗೋಷ್ಠಿ ಇನ್ನಿತರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ವಿವಿ ಕುಲಪತಿ ಪ್ರೊ.ಕೆ.ಸಿ. ವೀರಣ್ಣ, ಡಾ.ಬಸವರಾಜ, ಡಾ.ಎಂ.ಕೆ. ತಾಂದಲೆ, ಡಾ.ಶ್ರೀಕಾಂತ ಕುಲಕರ್ಣಿ, ಸಚಿನ್, ಡಾ.ರಾಮಪ್ಪ ಕೊರವಾರ, ಡಾ.ಪ್ರಕಾಶ ರಾಠೋಡ್, ಡಾ.ಚನ್ನಪ್ಪಗೌಡ, ಡಾ.ಶಿವಶರಣಪ್ಪ, ಡಾ.ಗಣಾಶ್ವರ, ವಿಕ್ರಮ ಚಕೋತೆ, ವಿಶ್ವನಾಥ ಝಿಳ್ಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net