

ಬೀದರ್: ನಾನು, ನನ್ನದು, ನನ್ನಿಂದಲೇ, ನನಗಿಂತ ಮಿಗಿಲಾದವರು ಯಾರೂ ಇಲ್ಲ ಎಂಬ ಅಹಂಭಾವ ಜೀವನದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಹೀಗಾಗಿ ಮೊದಲು ನಮ್ಮಲ್ಲಿರುವ ಅಹಂ ಬಿಡಬೇಕು ಎಂದು ಹುಬ್ಬಳ್ಳಿ ಬ್ರಹ್ಮಕುಮಾರಿ ಕೇಂದ್ರದ ಸಂಚಾಲಕಿ ಬಿಕೆ ವೀಣಾ ಹೇಳಿದರು.
ನಗರದ ಕರ್ನಾಟಕ ಫಾರ್ಮಸಿ ಕಾಲೇಜು ಮೈದಾನದಲ್ಲಿ ಬ್ರಹ್ಮಕುಮಾರಿ ಕೇಂದ್ರ ಶಿವಶಕ್ತಿ ಭವನ ಆಯೋಜಿಸಿದ್ದ ಮೂರು ದಿನದ ವಿಶೇಷ ಪ್ರವಚನದ ಕೊನೇ ದಿನ ಮಾತನಾಡಿದ ಅವರು, ಅಹಂ ತೊರೆದಾಗಲೇ ಮಾತ್ರ ಜೀವನ ನೆಮ್ಮದಿಯಿಂದ ಸಾಗುತ್ತದೆ ಎಂದರು.
ಮಾನವನ ಜೀವನ ದೇವರು ಕೊಟ್ಟ ವರ. ಸಂತಸದಿಂದ ಬದುಕುವುದೇ ಮೂಲ ಉದ್ದೇಶವಾಗಬೇಕು. ಒಳ್ಳೆಯದನ್ನು ಹುಡುಕಿಕೊಂಡು ಬದುಕಿದರೆ ಆನಂದ ಸಿಗುತ್ತದೆ. ಬೇರೆಯವರೊಂದಿಗೆ ಹೋಲಿಸಿಕೊಂಡು ಬದುಕಬೇಡಿ. ಅಧ್ಯಾತ್ಮಕ್ಕಾಗಿ ನಿತ್ಯ ಸಮಯ ನೀಡಬೇಕು ಎಂದು ಹೇಳಿದರು.
ನಮಗಾಗಿ ಸಮಯ ತೆಗೆದುಕೊಳ್ಳಬೇಕು. ಮನಸ್ಸು ಗೆದ್ದವನೇ ಮನ್ಮಥ, ಮನದಲ್ಲಿ ಸುಖ, ಶಾಂತಿ, ಆನಂದ ಅಡಗಿದೆ. ಇಂಥ ಪ್ರವಚನ ಹಾಗೂ ಚಿಂತನೆಗಳನ್ನು ಆಲಿಸಿ ವಿಚಾರಗಳನ್ನು ಶಕ್ತಿಶಾಲಿ ಆಗಿಸಿಕೊಳ್ಳಬೇಕು. ಬೇರೆಯವರ ಬಗ್ಗೆ ಕೆಟ್ಟದ್ದನ್ನು ಬಯಸಿದರೆ ಅದು ನಮಗೆ ದುಖ ನೀಡುತ್ತದೆ. ಆನಂದ ಅನುಭವಿಸಲು ಕ್ರೋಧ, ಅಹಂಕಾರ, ದ್ವೇಷ ಬಿಡಬೇಕು. ಅದರ ಮೂಲ ಎಲ್ಲಿದೆ ಎಂಬುದನ್ನು ಸಂಶೋಧಿಸಬೇಕೆಂದು ಸಲಹೆ ನೀಡಿದರು.
ಆನಂದಮಯ ಜೀವನ ಅನುಭವಿಸಲು ಆತ್ಮದ ಕಡೆ ಮುಖ ಮಾಡಬೇಕು. ನಮ್ಮ ಸೌಂದರ್ಯ ಬಗ್ಗೆ ನಮಗೆ ಅಭಿಮಾನ ಇರಬೇಕು. ಇತರರ ಸುಖದಲ್ಲಿ ತನ್ನ ಸುಖ ಕಾಣಬೇಕು. ಪರಮಾತ್ಮನಲ್ಲಿ ಏನೂ ಕೇಳುವ ಅಗತ್ಯವಿಲ್ಲ. ಯಾರಿಗೆ ಏನು ಕೊಡಬೇಕು ಎನ್ನುವುದನ್ನು ಅರಿತು ದೇವರು ಕೊಡುತ್ತಾನೆ. ದೇವರ ನಾಮಸ್ಮರಣೆ ಮಾಡಿ ಎಂದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸತೀಶ್ ಪಾಟೀಲ್, ಉಪಾಧ್ಯಕ್ಷ ಬಿ.ಜಿ. ಶೆಟಕಾರ, ಕೆಆರ್.ಇ. ಟ್ರಸ್ಟ್ ಅಧ್ಯಕ್ಷ ಬಸವರಾಜ ಜಿ.ಪಾಟೀಲ್, ಕಾರ್ಯದರ್ಶಿ ಮಡಿವಾಳಪ್ಪ ಗಂಗಶೆಟ್ಟಿ, ಬ್ರಹ್ಮಕುಮಾರಿ ಕೇಂದ್ರ ಶಿವಶಕ್ತಿ ಭವನದ ಬಿಕೆ ಸುಮಂಗಲಾ, ಬಿಕೆ ಸುನಂದಾ, ಬಿಕೆ ಪಾರ್ವತಿ ಇತರರಿದ್ದರು.