

ಬೀದರ್: ಭಾಲ್ಕಿ ವಿಧಾನಸಭೆ ಕ್ಷೇತ್ರದ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶ್ರಮ ಅಪಾರ. ಗಡಿ ಜಿಲ್ಲೆಯನ್ನು ಮಾದರಿಯಾಗಿ ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಉದ್ಯಮಿ ಜೈರಾಜ ಖಂಡ್ರೆ ಹೇಳಿದರು.
ನೌಬಾದ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಚಿವ ಈಶ್ವರ ಖಂಡ್ರೆ ಜನ್ಮದಿನ ನಿಮಿತ್ತ ಅಭಿಮಾನಿ ಬಳಗ ಆಯೋಜಿಸಿದ್ದ ಮಕ್ಕಳಿಗೆ ಪೆನ್ ಮತ್ತು ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾಲ್ಕಿ ಸೇರಿ ಜಿಲ್ಲಾದ್ಯಂತ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದಾರೆ. ಶಿಕ್ಷಣ, ಆರೋಗ್ಯ ಕ್ಷೇತ್ರ ಸೇರಿ ಮೂಲಸೌಕರ್ಯಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನೀರಾವರಿ ಯೋಜನೆ ರೂಪಿಸಿ ರೈತರ ಹೊಲಗಳಿಗೆ ನೀರು ಹರಿಸುವುದರ ಜತೆಗೆ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ ಎಂದು ಕೊಂಡಾಡಿದರು.
ಖಂಡ್ರೆ ಅವರಲ್ಲಿ ಸಂಘಟನಾ ಶಕ್ತಿ ಇದೆ. ಅಂತಲೇ ರಾಜ್ಯ, ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದಿದ್ದಾರೆ. ಅರಣ್ಯ ಸಚಿವರಾದ ನಂತರ ಹಸಿರುಮಯ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಶ್ರಮಿಸುತ್ತಿದ್ದಾರೆ ಎಂದರು.
ಕೆಪಿ ಪ್ರೌಢ ಶಾಲೆ ಮುಖ್ಯಗುರು ವಿಜಯಕುಮಾರ ಪಾಟೀಲ್ ಯರನಳ್ಳಿ, ಮಾಣಿಕೇಶ ಪಾಟೀಲ್ ಮಾತನಾಡಿದರು. ಮುಖ್ಯಗುರು ಸುಧಾ ಇತರರಿದ್ದರು.