

ಬೀದರ್: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಹನ್ನೊಂದು ದಿನಗಳ ಸಿದ್ಧರಾಮೇಶ್ವರ ನಮ್ಮೂರ 12ನೇ ಜಾತ್ರಾ ಮಹೋತ್ಸವ ಸಂಭ್ರಮದೊಂದಿಗೆ ತೆರೆ ಕಂಡಿತು.
ಕೊನೆಯ ದಿನ ರಾಚೋಟೇಶ್ವರ ಕರ್ತುೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಗಂಗಾ ಪೂಜೆ, ಅಲಂಕೃತ ವಾಹನದಲ್ಲಿ ಸಿದ್ಧರಾಮೇಶ್ವರ ಭಾವಚಿತ್ರ, ಸಾರೋಟಿನಲ್ಲಿ ನಾಡಿನ 12 ಮಠಾಧೀಶರ ಭವ್ಯ ಮೆರವಣಿಗೆ ಹಾಗೂ ಧರ್ಮಸಭೆ ಜರುಗಿದವು.
ಬೀದರ್-ಭಾಲ್ಕಿ ಮುಖ್ಯ ರಸ್ತೆಯಲ್ಲಿ ಇರುವ ಜ್ಯಾಂತಿ ಪೆಟ್ರೋಲ್ ಬಂಕ್ ಸಮೀಪದಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಹಾಯ್ದು ರಾಚೋಟೇಶ್ವರ ಸಂಸ್ಥಾನ ಮಠಕ್ಕೆ ತಲುಪಿ ಸಮಾರೋಪಗೊಂಡಿತು.
ಅಲಂಕೃತ ವಾಹನದಲ್ಲಿ ಸಿದ್ಧರಾಮೇಶ್ವರ ಭಾವಚಿತ್ರ ಇರಿಸಲಾಗಿತ್ತು. ಎರಡು ಸಾರೋಟಿನಲ್ಲಿ ಹುಡಗಿ, ಚಿಟಗುಪ್ಪ, ಠಾಣಾಕುಶನೂರು, ಹಣೆಗಾಂವ್, ಕೌಳಾಸ, ಮಳಚಾಪುರ, ನಾಗೂರ, ಮಂಠಾಳ, ಗುಡಪಳ್ಳಿ, ಸದಲಾಪುರ, ಧನಾಶ್ರೀ ಶ್ರೀಗಳು ಹಾಗೂ ಮಾತೆ ಬಸವಾಂಜಲಿ ಇದ್ದರು. ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ಮುಂದಾಳತ್ವ ವಹಿಸಿದ್ದರು.
ಮಹಿಳೆಯರು ಕೈಯಲ್ಲಿ ಆರತಿ ಹಿಡಿದು, ಭಜನೆ, ದೇವರ ನಾಮಸ್ಮರಣೆ ಮಾಡುತ್ತ ಸಾಗಿದರು. ರಾಚೋಟೇಶ್ವರರಿಗೆ ಜಯವಾಗಲಿ, ಸಿದ್ಧರಾಮೇಶ್ವರರಿಗೆ ಜಯವಾಗಲಿ, ಹಾವಗಿಲಿಂಗೇಶ್ವರ ಶಿವಾಚಾರ್ಯರಿಗೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು. ಕುಂಭ ಕಳಸ ಹೊತ್ತ ಸುಮಂಗಲೆಯರು, ಬ್ಯಾಂಡ್ ಬಾಜಾ ಮೆರವಣಿಗೆಗೆ ವಿಶೇಷ ಕಳೆ ನೀಡಿದವು. ವಿವಿಧೆಡೆಯ ಅಪಾರ ಭಕ್ತರು ಶ್ರದ್ಧೆ, ಭಕ್ತಿಯಿಂದ ಪಾಲ್ಗೊಂಡರು.
ಮಠದಲ್ಲಿ 12 ದಂಪತಿಗಳು 12 ಮಠಾಧೀಶರ ಮಂಟಪ ಪೂಜೆ ನೆರವೇರಿಸಿದರು.
ರಾಚೋಟೇಶ್ವರ ಮಠಕ್ಕೆ ರೂ. 50 ಲಕ್ಷ ಅನುದಾನ: ಈಶ್ವರ ಖಂಡ್ರೆ
ರಾಚೋಟೇಶ್ವರ ಸಂಸ್ಥಾನ ಮಠದ ವಿವಿಧ ಕಾಮಗಾರಿಗಳಿಗೆ ಶಾಸಕರ ನಿಧಿಯಿಂದ ಇನ್ನೂ ರೂ. 50 ಲಕ್ಷ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಸಿದ್ಧರಾಮೇಶ್ವರ ನಮ್ಮೂರ 12ನೇ ಜಾತ್ರಾ ಮಹೋತ್ಸವ ಸಮಾರೋಪ ಹಾಗೂ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಕಲ್ಯಾಣ ಮಂಟಪ ನಿರ್ಮಾಣ ಸೇರಿದಂತೆ ಮಠಕ್ಕೆ ರೂ. 50 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ಹಿಂದೆ ಕಿರಿದಾಗಿದ್ದ ಮಠ ಈಗ ವಿಶಾಲವಾಗಿದೆ. ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಠವನ್ನು ಮಾದರಿಯಾಗಿ ರೂಪಿಸಿದ್ದಾರೆ. ಭಕ್ತರ ಮನಸ್ಸು ಕಟ್ಟುವ ಕೆಲಸವನ್ನೂ ಅವರು ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಸ್ತುತ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಅಗತ್ಯವಿದೆ. ಮಠ, ಮಾನ್ಯಗಳಿಂದ ಉತ್ತಮ ಸಂಸ್ಕಾರ ದೊರೆಯುತ್ತದೆ ಎಂದು ತಿಳಿಸಿದರು.
ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, 11 ದಿನಗಳ ಜಾತ್ರೆ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ನೆರವೇರಿದ್ದಕ್ಕೆ ಸಂತಸವಾಗಿದೆ ಎಂದು ಹೇಳಿದರು.
ಜಾತ್ರೆಯ ಕಾರ್ಯಗಳಿಗೆ ಹಲಬರ್ಗಾ ಹಾಗೂ ವಿವಿಧೆಡೆಯ ಭಕ್ತರು ತನು, ಮನ, ಧನದಿಂದ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಧ್ಯಾನ ಮಂದಿರ, ದಾಸೋಹ ಭವನ, ಕಲ್ಯಾಣ ಮಂಟಪ, ಸೋಮೇಶ್ವರ ನಿಲಯ, ಅಂದದ ಉದ್ಯಾನ, ರಾಚೋಟೇಶ್ವರ, ಹಾನಗಲ್ ಕುಮಾರ ಶಿವಯೋಗಿಗಳ ಪ್ರತಿಮೆ ಮೊದಲಾದ ಅಭಿವೃದ್ಧಿ ಕೆಲಸಗಳು ಮಠದಲ್ಲಿ ಆಗಿವೆ. ಮಠ ಎಲ್ಲರ ಸಹಕಾರದಿಂದಾಗಿಯೇ 12 ವರ್ಷಗಳಲ್ಲಿ ಬೃಹತ್ ಆಗಿ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು. ಸ್ವಾಮೀಜಿಗಳು, ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.