ಜನಪರ ಕಾವ್ಯಗಳತ್ತ ಹರಿಸಿ ಚಿತ್ತ

Kavya Gosti
Published on

ಬೀದರ್: ಜನಪರ, ಜೀವಪರ ಕಾವ್ಯಗಳತ್ತ ಯುವ ಸಾಹಿತಿಗಳು ಚಿತ್ತ ಹರಿಸಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಚಂದ್ರಕಲಾ ಬಿದ್ರಿ ಹೇಳಿದರು.

ರಂಗಮಂಡಲ ಬೆಂಗಳೂರು, ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತು ಇಲಾಖೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದಡಿ ನಗರದಲ್ಲಿ ಹಮ್ಮಿಕೊಂಡಿದ್ದ ಕಾವ್ಯ ಸಂಸ್ಕೃತಿ ಯಾನ ಹಾಗೂ ಶರಣರ ನಾಡಿನಲ್ಲಿ ಜನರೆಡೆಗೆ ಕಾವ್ಯ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕಾವ್ಯ ಕನಸು ಮತ್ತು ವಾಸ್ತವಗಳ ಸಂಗಮ. ನಾವು ಪರಿಶುದ್ಧರಾಗಿದ್ದಾಗ ನಮ್ಮಿಂದ ರಚನೆಗೊಳ್ಳುವ ಕಾವ್ಯ ಶುದ್ಧವಾಗಿರುತ್ತದೆ. ಇಲ್ಲವಾದಲ್ಲಿ ಹೇಳುವುದು ಒಂದು, ಬರೆಯುವುದು ಮತ್ತೊಂದು ಎಂಬಂತಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಜನ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮತನ ಮರೆಯುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಮಾತೃಭಾಷೆ ಶಿಕ್ಷಣಕ್ಕೆ ಆದ್ಯತೆ ನೀಡುವ ಜತೆಗೆ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಮಾನವೀಯತೆ, ಕಳಕಳಿ ಇರುವವರು ಕವಿಯಾಗಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ವಿಜಯಶ್ರೀ ಸಬರದ, ಗಡಿ ಪ್ರದೇಶಾಭಿವೃದ್ಧಿ ಪ್ರಾಕಾರ ಸದಸ್ಯ ಸಂಜೀವಕುಮಾರ ಅತಿವಾಳೆ, ಸಾಹಿತಿ ಪುಣ್ಯವತಿ ವಿಸಾಜಿ, ಮಲ್ಲಿಕಾರ್ಜುನ ಮಹಾಮನೆ ಮಾತನಾಡಿದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಕಾಶೀನಾಥರಾವ ಚಲವಾ, ಅನೀಲಕುಮಾರ ದೇಶಮುಖ, ಬಿ.ಎಂ. ಅಮರವಾಡಿ, ಶಕೀಲ್ ಐ.ಎಸ್. ಇತರರಿದ್ದರು. ಅಜಿತ್ ಎನ್. ಸ್ವಾಗತಿಸಿದರು. ಸೃಜನ್ಯ ಅತಿವಾಳೆ ನಿರೂಪಣೆ ಮಾಡಿ ವಂದಿಸಿದರು. ನಂತರ ನಡೆದ ಸಾಹಿತಿ ಎಂ.ಜಿ. ದೇಶಪಾಂಡೆ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ಸಾಹಿತಿಗಳು ಸ್ವರಚಿತ ಕವನ ವಾಚನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net