ಮಾನವ ಕಲ್ಯಾಣವೇ ಧರ್ಮ, ಆಚರಣೆ ಗುರಿ

oplus_2
oplus_2
Published on

ಬೀದರ್: ದೇಶದಲ್ಲಿ ಹಲವು ಧರ್ಮ ಹಾಗೂ ಆಚರಣೆಗಳಿವೆ. ಅವೆಲ್ಲವುಗಳ ಗುರಿ ಮಾನವ ಕಲ್ಯಾಣವೇ ಆಗಿದೆ ಎಂದು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ನುಡಿದರು.

ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಸಿದ್ಧರಾಮೇಶ್ವರ ನಮ್ಮೂರ ಜಾತ್ರೆ ಹಾಗೂ ಹಾವಗಿಲಿಂಗೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಬುಧವಾರ ನಡೆದ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಆಧ್ಯಾತ್ಮ ಜ್ಞಾನ ಹಾಗೂ ಭಾವೈಕ್ಯ ದೇಶದ ಉಸಿರಾಗಿದೆ. ದೇಶ ಉಳಿದರೆ ಧರ್ಮ ಉಳಿಯಲು ಸಾಧ್ಯವಿದೆ ಎಂದು ತಿಳಿಸಿದರು.

ಜಾತಿ, ಧರ್ಮಗಳ ಚೌಕಟ್ಟು ಮೀರಿ ಮಾನವೀಯ ತತ್ವದ ತಳಹದಿ ಮೇಲೆ ಆರೋಗ್ಯಪೂರ್ಣ ಸಮಾಜ ನಿರ್ಮಿಸಬೇಕೆಂಬುದೇ ಜಗದ್ಗುರು ರೇಣುಕಾಚಾರ್ಯರು ಹಾಗೂ ಜಗಜ್ಯೋತಿ ಬಸವಣ್ಣನವರ ಗುರಿಯಾಗಿತ್ತು. ಈ ದಿಸೆಯಲ್ಲಿ ಮುನ್ನಡೆದು ಶಾಂತಿ, ಸಮಾಧಾನದ ವಾತಾವರಣ ನಿರ್ಮಿಸಲು ಶ್ರಮಿಸಬೇಕಾಗಿದೆ ಎಂದು ಹೇಳಿದರು.

ದೇಶದಲ್ಲಿ ಸಂಸ್ಕøತಿ ಹಾಗೂ ಪರಂಪರೆಗೆ ಬಹಳ ಪ್ರಾಮುಖ್ಯ ಇದೆ. ಮಾನವೀಯ ಆದರ್ಶ ಮೌಲ್ಯಗಳ ಮೂಲಕ ಸಮಾಜದಲ್ಲಿ ಸೌಹಾರ್ದ ಬೆಳೆಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ನಾಡಿನ ವಿವಿಧ ಭಾಗಗಳಲ್ಲಿ ನಡೆಯುವ ಜಾತ್ರೆಗಳ ಮೂಲ ಉದ್ದೇಶ ಸಾಮರಸ್ಯ ಹಾಗೂ ಸದ್ಭಾವನೆ ಬೆಳೆಸುವುದಾಗಿದೆ ಎಂದು ಹೇಳಿದರು.

12 ವರ್ಷಗಳ ಅವಧಿಯಲ್ಲಿ ಧರ್ಮ, ಸಂಸ್ಕøತಿ, ಸಂಸ್ಕಾರ, ಸದ್ವಿಚಾರಗಳ ಮೂಲಕ ಹಲಬರ್ಗಾ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಿದ ಶ್ರೇಯಸ್ಸು ಹಾವಗಿಲಿಂಗೇಶ್ವರ ಶ್ರೀಗಳಿಗೆ ಸಲ್ಲುತ್ತದೆ. ಭಕ್ತ ಸಮುದಾಯ ಅವರ ಆದರ್ಶ ದಾರಿಯಲ್ಲಿ ಸಾಗಿ, ಸದೃಢ, ಸಶಕ್ತ ದೇಶ ಹಾಗೂ ಧರ್ಮವನ್ನು ಕಟ್ಟುವಂತಾಗಲಿ ಎಂದು ಶುಭ ಹಾರೈಸಿ, ಶ್ರೀಗಳಿಗೆ ರೇಷ್ಮೆ ಶಾಲು ಹೊದಿಸಿ, ಫಲ ಪುಷ್ಪ ನೀಡಿ ಆಶೀರ್ವದಿಸಿದರು.

ನೇತೃತ್ವ ವಹಿಸಿದ್ದ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಭಕ್ತರ ಭಾಗ್ಯ ಬಹಳ ದೊಡ್ಡದಿದೆ. ರಂಭಾಪುರಿ ಜಗದ್ಗುರುಗಳು ಆಗಮಿಸಿ, ಜಾತ್ರೆ ಹಾಗೂ ತಮ್ಮ ದ್ವಾದಶ ಪಟ್ಟಾಧಿಕಾರ ಮಹೋತ್ಸವದ ಸಾನಿಧ್ಯ ವಹಿಸಿರುವುದು ಪೂರ್ವಾರ್ಜಿತ ಪುಣ್ಯದ ಫಲ ಎಂದು ಬಣ್ಣಿಸಿದರು.

ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಸದಾಕಾಲ ಒಳ್ಳೆಯದನ್ನೇ ಮಾಡುತ್ತ ಬಂದಿದೆ. ಜಗದ್ಗುರು ರೇಣುಕಾಚಾರ್ಯರ ತತ್ವ, ಸಿದ್ಧಾಂತ ಹಾಗೂ 12ನೇ ಶತಮಾನದ ಶರಣರ ಸಾಮಾಜಿಕ ಚಿಂತನೆಗಳು ಎಲ್ಲರ ಬದುಕಿಗೆ ದಾರಿದೀಪವಾಗಿವೆ ಎಂದು ತಿಳಿಸಿದರು.

ಮೆಹಕರದ ರಾಜೇಶ್ವರ ಶಿವಾಚಾರ್ಯ ಸಮಾರಂಭವನ್ನು ಉದ್ಘಾಟಿಸಿದರು. ಹುಡುಗಿ ಹಿರೇಮಠದ ವಿರೂಪಾಕ್ಷ ಶಿವಾಚಾರ್ಯ, ಹಣೆಗಾಂವ್‍ನ ಶಂಕರಲಿಂಗ ಶಿವಾಚಾರ್ಯ ಕೌಳಾಸ ಶಿವಾಚಾರ್ಯ ಸಮ್ಮುಖ ವಹಿಸಿದ್ದರು. ಪ್ರಮುಖರಾದ ಶಾಂತಕುಮಾರ ಪ್ರಭಾ, ಮಲ್ಲಕಾರ್ಜುನ ಚಲುವಾ, ವೀರಶೆಟ್ಟಿ ಪಾಟೀಲ, ರಮೇಶ ಪ್ರಭಾ, ಉಮಾಕಾಂತ ಪ್ರಭಾ ಮತ್ತಿತರರು ಇದ್ದರು.

ಇದಕ್ಕೂ ಮುನ್ನ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ದ್ವಾದಶ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಭಕ್ತರು ಹಾವಗಿಲಿಂಗೇಶ್ವರ ಶಿವಾಚಾರ್ಯರಿಗೆ ಶಾಸ್ತ್ರೋಕ್ತವಾಗಿ ಮಂಗಲ ಸ್ನಾನ ಮಾಡಿಸಿ, ಹೊಸ ಬಟ್ಟೆ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net