

ಬೀದರ್: ಮಾತೃಭಾಷೆ ಶಿಕ್ಷಣ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಲಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಋಷಿಕೇಶ ಶಿಕ್ಷಣ ಸಂಸ್ಥೆ ಸಂಚಾಲಿತ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದಲ್ಲಿ ಓದಿದ ಬಹಳಷ್ಟು ಮಕ್ಕಳು ಉನ್ನತ ಸಾಧನೆ ಮಾಡಿದ್ದಾರೆ. ಹೀಗಾಗಿ ಪಾಲಕರು ಮಕ್ಕಳಿಗೆ ಮಾತೃಭಾಷೆ ಕನ್ನಡದಲ್ಲೇ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.
ಅರುಣೋದಯ ಶಾಲೆ ಮಕ್ಕಳಿಗೆ ಸಂಸ್ಕಾರಯುತ ಗುಣಮಟ್ಟದ ಶಿಕ್ಷಣ ಕೊಡುತ್ತಿರುವುದು ಶ್ಲಾಘನೀಯ ಎಂದರು.
ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಮಕ್ಕಳು ಪಾಲಕರನ್ನು ಅನುಕರಿಸುತ್ತಾರೆ. ಹೀಗಾಗಿ ಪಾಲಕರು ಮಕ್ಕಳ ಮುಂದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಥಮಿಕ ಹಂತದಲ್ಲೇ ಗುಣಮಟ್ಟದ ಶಿಕ್ಷಣ ನೀಡಿದ್ದಲ್ಲಿ ಮಕ್ಕಳು ಜೀವನದಲ್ಲಿ ಮಹತ್ವದ ಸಾಧನೆ ಮಾಡಬಲ್ಲರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಋಷಿಕೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕುಶಾಲ್ ಪಾಟೀಲ ಗಾದಗಿ ಮಾತನಾಡಿ, ಕನ್ನಡ ಭಾಷೆ ಬೆಳವಣಿಗೆಗೆ ಕನ್ನಡ ಮಾಧ್ಯಮ ಶಾಲೆಗಳ ಉಳಿವು ಅಗತ್ಯವಾಗಿದೆ. ಕನ್ನಡ ಶಾಲೆಗಳಿಗೆ ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.
ಡಯಟ್ ಉಪನ್ಯಾಸಕಿ ಗೀತಾ ಗಡ್ಡಿ ಮಾತನಾಡಿದರು. ನಾರಾಯಣ್ ಭಟ್ ಜಾದೂ ಪ್ರದರ್ಶಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು. ಶಿಕ್ಷಕರನ್ನು ಸತ್ಕರಿಸಿ, ಸ್ಮರಣಿಕೆ ನೀಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪಾಲಕರು, ಕಿರು ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
2019-20 ರಿಂದ 2023-24ನೇ ಸಾಲಿನ ವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಸಿದ್ರಾಮ ಸಿಂಧೆ, ರಾಜೇಂದ್ರ ಮಣಗೇರಿ, ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಮತ್ತಿತರರು ಇದ್ದರು. ಶಿಕ್ಷಕಿ ಅಲ್ಕಾವತಿ ನಿರೂಪಿಸಿದರು.