ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಅಗತ್ಯ

Illal
Published on

ಬಸವಕಲ್ಯಾಣ: ಬಾಲ್ಯದಿಂದಲೇ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ನೀಡುವ ಮೂಲಕ ಅವರಲ್ಲಿನ ಕಲೆಯ ವಿಕಾಸಕ್ಕೆ ವೇದಿಕೆ ಕಲ್ಪಿಸಬೇಕು ಎಂದು ತಾಪಂ ಇಒ ರಮೇಶ ಸುಲ್ಪಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಕಲಿಕೆ ಟಾಟಾ ಟ್ರಸ್ಟ್ ವತಿಯಿಂದ ತಾಲೂಕಿನ ಇಲ್ಲಾಳ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಾಲ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಪರಿಸರ ಕಲ್ಪಿಸಿ ಅವರನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಎಲ್ಲರ ಹೊಣೆ ಎಂದು ಹೇಳಿದರು.

ಕಲಿಕೆ ಟಾಟಾ ಟ್ರಸ್ಟ್ ಜಿಲ್ಲಾ ವ್ಯವಸ್ಥಾಪಕಿ ಮಲ್ಲಮ್ಮ ಬಿರಾದಾರ್ ಮಾತನಾಡಿ, ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಾಮಥ್ರ್ಯ ಅಭಿವೃದ್ಧಿ ಮಾಡುವ ಮೂಲಕ ಅಂಗನವಾಡಿ ಕೇಂದ್ರದ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಭಾಷೆ, ದೈಹಿಕ, ಸಾಮಾಜಿಕ, ಭಾವನಾತ್ಮಕ ಮತ್ತು ಬೌದ್ಧಿಕ ಬೆಳವಣಿಗೆ ಆದಾಗ ಮಾತ್ರ ಮಗುವಿನ ಸರ್ವತೋಮುಖ ಬೆಳವಣಿಗೆಯಾಗಲು ಸಾಧ್ಯ ಎಂದರು.

ಹಿರಿಯ ಮೇಲ್ವಿಚಾರಕಿ ದೈವತಾ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅಂಗನವಾಡಿಗಳು ಕೇಂದ್ರ ಬಿಂದುವಾಗಿದೆ. 3ರಿಂದ 6 ವಯಸ್ಸಿನಲ್ಲಿ ಶೇ.85ರಷ್ಟು ಮೆದುಳಿನ ಬೆಳವಣಿಗೆಯಾಗುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲಿಸಬೇಕು. ಇಲ್ಲಿನ ಆಟ-ಊಟದೊಂದಿಗೆ ಪಾಠ ಕಲಿಸಲಾಗುತ್ತದೆ ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೌತಮ ಸಿಂಧೆ, ವಲಯದ ಹಿರಿಯ ಮೇಲ್ವಿಚಾರಕಿ ಯಶೋಧಾ ಇತತರರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದಂತ ಮಕ್ಕಳು, ಪಾಲಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕಲಿಕೆ ಟಾಟಾ ಟ್ರಸ್ಟ್ ವತಿಯಿಂದ ಅಭಿನಂದನಾ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net