ಶಾಂತಿಯುತ ಬೀದರ್ ಬಂದ್ ಗೆ ಕೈಜೋಡಿಸಿ

dssa
Published on

ಬೀದರ್: ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆಗೆ ಆಗ್ರಹಿಸಿ ಜ.9ರಂದು ಬೀದರ್ ನಗರ ಬಂದ್ ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲ ಸಮುದಾಯಗಳ ಮುಖಂಡರು ಶಾಂತಿಯುತ ಬಂದ್ಗೆ ಕೈಜೋಡಿಸಬೇಕು ಎಂದು ಸ್ವಾಭಿಮಾನಿ ಡಾ.ಬಿ.ಆರ್. ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಉಮೇಶಕುಮಾರ ಸ್ವಾರಳ್ಳಿಕರ್ ಕೋರಿದರು.

ಸಂವಿಧಾನ ಬಗ್ಗೆ ಸಚಿವ ಷಾ ಅವರಿಗಿದ್ದ ಆಕ್ರೋಶ ಲೋಕಸಭೆಯಲ್ಲಿ ಹೊರಬಂದಿದೆ. ಈ ಘಟನೆಯಿಂದ ಬಿಜೆಪಿಗೆ ಅಂಬೇಡ್ಕರ್ ಬಗ್ಗೆ ಇರುವ ನಿಲುವು ಜನರಿಗೆ ಗೊತ್ತಾಗಿದೆ. ಷಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಸ್ಪತ್ರೆ ಹಾಗೂ ಔಷಧಂಗಡಿ ಹೊರತುಪಡಿಸಿ ನಗರದ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಬೇಕು. ಬೆಳಗ್ಗೆ 7ಕ್ಕೆ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನಂತರ ಬೃಹತ್ ಪ್ರತಿಭಟನೆ ನಡೆಯಲಿದ್ದು, 10 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಮಿತಿ ಗೌರವಾಧ್ಯಕ್ಷ ಚಂದ್ರಕಾಂತ ನೀರಾಟೆ ಮಾತನಾಡಿ, ಬೀದರ್ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲಿಸಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಮಿತಿ ಗೌರವಾಧ್ಯಕ್ಷ ಕಲ್ಯಾಣರಾವ ಭೋಸ್ಲೆ, ಕಾರ್ಯಾಧ್ಯಕ್ಷ ವಿಷ್ಣುವರ್ಧನ್ ವಾಲ್ದೊಡ್ಡಿ, ಉಪಾಧ್ಯಕ್ಷರಾದ ರಾಜಕುಮಾರ ಗುನ್ನಳ್ಳಿ, ರಾಜಕುಮಾರ ಭಾವಿಕಟ್ಟಿ, ಕಾರ್ಯದರ್ಶಿ ವಿಶಾಲ ಹೊನ್ನಾ, ಸಂಘಟನಾ ಕಾರ್ಯದರ್ಶಿ ರಾಹುಲ್ ಡಾಂಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net