

ಬೀದರ್: ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ತೊಗರಿ ಖರೀದಿ ಮಾಡುತ್ತಿದ್ದು, ಪ್ರತಿ ಕ್ವಿಂಟಾಲ್ ಗೆ 7550 ರೂ. ದರ ನಿಗದಿಪಡಿಸಿದೆ. ಇದರ ಜತೆಯಲ್ಲಿ ರಾಜ್ಯ ಸರ್ಕಾರ ಸಹ ಪ್ರತಿ ಕ್ವಿಂಟಾಲ್ಗೆ 4500 ರೂ. ಸಹಾಯಧನ ನೀಡಬೇಕು ಎಂದು ಜಿಲ್ಲಾ ರೈತ ಸಂಘ ಆಗ್ರಹಿಸಿದೆ.
ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ನೇತೃತ್ವದ ನಿಯೋಗ ಮುಖ್ಯಮಂತ್ರಿ ಅವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿ, ಪ್ರಸಕ್ತ ವರ್ಷ ತೊಗರಿ ಸರಿಯಾಗಿ ಬೆಳೆದಿದೆ. ಆದರೆ ಬಹುತೇಕ ಕಡೆ ಹೂ, ಕಾಯಿ ಬಿಡದೆ ಹಾನಿಯಾಗಿದೆ. ಹೀಗಾಗಿ ರೈತರ ನೆರವಿಗೆ ಸರ್ಕಾರ ಬರಬೇಕು ಎಂದು ಆಗ್ರಹಿಸಿದರು.
ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡವರ ಸೋಯಾಬೀನ್ ಖರೀದಿ ಮಾಡಬೇಕು.ಉದ್ದು, ಸೋಯಾಬೀನ್, ತೊಗರಿ ಬೆಳೆ ವಿಮೆ ಕಟ್ಟಿರುವ ರೈತರಿಗೆ ಬೆಳೆ ಹಾನಿಯಾಗಿದ್ದರಿಂದ ವಿಮೆ ಶೀಘ್ರದಲ್ಲಿ ಪಾವತಿಸಬೇಕು. ರೈತರ ಆರ್ಥಿಕ ಸ್ಥಿತಿ ಸುಧಾರಿಸುವುದಕ್ಕಾಗಿ ಡಿಸಿಸಿ ಬ್ಯಾಂಕ್ ನಿಂದ ಸೌಲ ಸೌಲಭ್ಯ ಒದಗಿಸಬೇಕು. ಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ಪಿಕ್ ಪಿಎಸ್ ಗಳಲ್ಲಿ ಖರೀದಿ ಕೇಂದ್ರ ಕಡ್ಡಾಯವಾಗಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಿ ರೈತರ ಹಿತ ಕಾಪಾಡಬೇಕು. ನಿರ್ಲಕ್ಷ್ಯ ಮಾಡಿದರೆ ಹೋರಾಟ ಮಾಡಲಾಗುವುದು ಎಂದು ಸಿಎಂ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ್, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಪ್ರಮುಖರಾದ ಸುಭಾಷ ರಗಟೆ, ಬಾಬುರಾವ ಜೋಳದಾಬಕೆ, ಶಂಕ್ರೆಪ್ಪ ಪಾರಾ, ಸಿದ್ರಾಮಪ್ಪ ಬಾಲಕುಂದೆ, ಪ್ರವೀಣ ಕುಲಕರ್ಣಿ, ನಾಗಯ್ಯಾ ಸ್ವಾಮಿ, ಬಸವಂತ ಡೊಂಗರಗಾ, ಬಸಪ್ಪ ಆಲೂರೆ, ಶಿವಾನಂದ ಹುಡಗೆ ಇದ್ದರು.