ಅಕ್ಷರ ಜ್ಯೋತಿ ಯಾತ್ರೆ 10 ರಂದು ಬೀದರ್ ಗೆ

Basavakumar Patil
Published on

ಬೀದರ್: ಕರ್ನಾಟಕದ ಕಿರೀಟ ಬೀದರ್ ನಿಂದ ಆರಂಭಗೊಂಡು ಈಗಾಗಲೇ ರಾಜ್ಯದ 31 ಶೈಕ್ಷಣಿಕ ಜಿಲ್ಲೆಗಳಲ್ಲಿ ಸಂಚರಿಸಿರುವ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಕ್ಷರ ಜ್ಯೋತಿ ಯಾತ್ರೆ ಜ. 10 ರಂದು ಬೀದರ್ ಗೆ ಮರಳಲಿದೆ.

ಅಂದು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ಜರುಗಲಿದ್ದು, ಭರದ ಸಿದ್ಧತೆಗಳು ನಡೆದಿವೆ.

ನವೆಂಬರ್ 5 ರಂದು ಬೀದರ್ ನಿಂದ ಹೊರಟು, ನ. 7 ರಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಉದ್ಘಾಟನೆಗೊಂಡಿದ್ದ ಯಾತ್ರೆ, ಭಾನುವಾರ ಬಾಗಲಕೋಟೆ ಜಿಲ್ಲೆಯ ಇಳಕಲ್‍ನಲ್ಲಿ ಸಂಚರಿಸಿತು.

ರಾಜ್ಯದ 34 ಶೈಕ್ಷಣಿಕ ಜಿಲ್ಲೆ ಹಾಗೂ ಗಡಿ ಭಾಗಗಳಲ್ಲಿ ಸಂಚರಿಸುವ ಗುರಿಯೊಂದಿಗೆ 63 ದಿನಗಳ ಯಾತ್ರೆ ಆರಂಭಿಸಲಾಗಿತ್ತು. ಈಗಾಗಲೇ 58 ದಿನಗಳಲ್ಲಿ 31 ಶೈಕ್ಷಣಿಕ ಜಿಲ್ಲೆಗಳು, ಗಡಿ ಭಾಗದ ಗೋವಾ, ಮಹಾರಾಷ್ಟ್ರದ ಸಂಕ, ಕಾಸರಗೂಡಿನಲ್ಲಿ ಸಂಚಾರ ಪೂರ್ಣಗೊಂಡಿದ್ದು, ವಿಜಯಪುರ, ಕಲಬುರಗಿ ಮಾರ್ಗವಾಗಿ ನ. 10ಕ್ಕೆ ಬೀದರ್ ಗೆ ತಲುಪಿ ಸಮಾರೋಪಗೊಳ್ಳಲಿದೆ ಎಂದು ಯಾತ್ರೆಯ ನೇತೃತ್ವ ವಹಿಸಿರುವ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ತಿಳಿಸಿದರು.

ಯಾತ್ರೆಯ ಅವಧಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಶಿಕ್ಷಕರೊಂದಿಗೆ ಸಮಾಲೋಚನೆ, ಶಿಕ್ಷಣಪ್ರೇಮಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸಾಧಕರನ್ನು ಭೇಟಿ ಮಾಡಲಾಗಿದೆ. ಯಾತ್ರೆ ರಾಜ್ಯದಾದ್ಯಂತ 40 ಸಾವಿರ ವಿದ್ಯಾರ್ಥಿಗಳನ್ನು ತಲುಪಿದೆ ಎಂದು ಹೇಳಿದರು.

ಯಾತ್ರೆಯಲ್ಲಿ ಮಕ್ಕಳಲ್ಲಿ ದೇಶಭಕ್ತಿ ಜಾಗೃತಗೊಳಿಸಲಾಗಿದೆ. ಶಿಕ್ಷಣದ ಜತೆಗೆ ಸಂಸ್ಕಾರದ ಅವಶ್ಯಕತೆ ಮನವರಿಕೆ ಮಾಡಲಾಗಿದೆ. ಮನಸ್ಸನ್ನು ಹಾಳುಗೆಡುವ ಸಂಗತಿಗಳಿಂದ ದೂರ ಉಳಿದು, ಸಾಧನೆ ಜತೆಗೆ ಸತ್ಪ್ರಜೆಗಳಾಗುವ ದಿಸೆಯಲ್ಲಿ ಮಾರ್ಗದರ್ಶನ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿರುವುದು ಸಂತಸದ ಸಂಗತಿ. ಆದರೆ, ಅವರ ಸಂದೇಶಗಳನ್ನು ಯುವಕರಿಗೆ ಮುಟ್ಟಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳದಿರುವುದು ಬೇಸರದ ಸಂಗತಿ. ಯಾತ್ರೆ ವೇಳೆ ಭೇಟಿ ನೀಡಲಾದ 25 ವಿಶ್ವವಿದ್ಯಾಲಯಗಳ ಮುಖ್ಯಸ್ಥರಿಗೆ ಬಸವಣ್ಣನವರ ಕುರಿತು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳನ್ನು ಏರ್ಪಡಿಸಲು ಮನವಿ ಮಾಡಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಬಸವಣ್ಣನವರ ಮೂರು ವಚನ ಒಳಗೊಂಡ ಭಾವಚಿತ್ರಗಳನ್ನು ವಿತರಿಸಲಾಗಿದೆ. ಬಸವಣ್ಣನವರ ಸಾಮಾಜಿಕ ಕಾರ್ಯಗಳನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದರು.

ಯಾತ್ರೆ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇಂದಿನ ದಿನಮಾನಗಳಲ್ಲಿ ಅಕ್ಷರ ಜಾಗೃತಿಯ ಈ ರೀತಿಯ ಯಾತ್ರೆಗಳ ಅವಶ್ಯಕತೆ ಇದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಗುರಿ ತಲುಪಲು ಮಾರ್ಗದರ್ಶನ ನೀಡಿದ್ದಕ್ಕೆ ವಿದ್ಯಾರ್ಥಿಗಳು ಸಂತಸಪಟ್ಟಿದ್ದಾರೆ. ಹೀಗಾಗಿ ನಮ್ಮ ಯಾತ್ರೆಯ ಶ್ರಮ ಸಾರ್ಥಕವಾಗಿದೆ ಎಂದು ಹೇಳಿದರು.

ತಮ್ಮ ನೇತೃತ್ವದ ಯಾತ್ರೆಯ ತಂಡದಲ್ಲಿ ಶಾಂತಪ್ಪ ದುಬಲಗುಂಡಿ, ಪಂಡಿತ ಬಾಳೂರೆ, ಓಂಕಾರ ಬುಯ್ಯಾ ಹಾಗೂ ಆಕಾಶ್ ಇದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net