

ಬೀದರ್: ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ನಡೆದ ಕಲಬುರಗಿ ವಿಭಾಗಮಟ್ಟದ ಮುಕ್ತ ಬ್ಯಾಸ್ಕೆಟ್‍ಬಾಲ್ ಟೂರ್ನಿಯಲ್ಲಿ ಕಲಬುರಗಿ ತಂಡ ಟ್ರೋಫಿ ಗೆದ್ದುಕೊಂಡಿದೆ.
ನುವಾರ ನಡೆದ ಫೈನಲ್ ಪಂದ್ಯದಲ್ಲಿ ಕಲಬುರಗಿ ತಂಡವು ಬಳ್ಳಾರಿ ತಂಡವನ್ನು 46-34 ರಲ್ಲಿ ಸೋಲಿಸಿ ಟ್ರೋಫಿ ಗೆದ್ದುಕೊಂಡಿತು.
ಬಳ್ಳಾರಿ ತಂಡ ರನ್ನರ್ ಅಪ್‍ಗೆ ತೃಪ್ತಿ ಪಟ್ಟುಕೊಂಡಿತು.
ವಿಜೇತ ತಂಡ ರೂ. 15 ಸಾವಿರ ನಗದು ಮತ್ತು ಟ್ರೋಫಿ ಹಾಗೂ ರನ್ನರ್ ಅಪ್ ತಂಡ ರೂ. 10 ಸಾವಿರ ನಗದು ಹಾಗೂ ಟ್ರೋಫಿಗೆ ಭಾಜನವಾಯಿತು.
ಮಹೇಶ ಬಳ್ಳಾರಿ ರೂ. 5 ಸಾವಿರ ನಗದಿನೊಂದಿಗೆ ಶ್ರೇಷ್ಠ ಆಟಗಾರ ಹಾಗೂ ಸಂದೀಪ್ ಕಲಬುರಗಿ ರೂ. 1 ಸಾವಿರ ನಗದಿನೊಂದಿಗೆ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಪಾತ್ರರಾದರು.
ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ವಿಜೇತ ತಂಡಗಳಿಗೆ ಟ್ರೋಫಿ ಪ್ರದಾನ ಮಾಡಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಡಾ. ನಾಗರಾಜ ಅವರು, ಟೂರ್ನಮೆಂಟ್ ಅನ್ನು ಮಾದರಿಯಾಗಿ ಸಂಘಟಿಸಲಾಗಿದೆ. ಆಟಗಾರರೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಬ್ಯಾಸ್ಕೆಟ್‍ಬಾಲ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ ತಾಳಂಪಳ್ಳಿ ಮಾತನಾಡಿ, ಟೂರ್ನಿ ಆಯೋಜನೆ ಅವಕಾಶ ದೊರೆತದ್ದು ಸಂತಸ ಉಂಟು ಮಾಡಿದೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಬರುವ ದಿನಗಳಲ್ಲೂ ಟೂರ್ನಿಗಳನ್ನು ಆಯೋಜಿಸುವ ಉದ್ದೇಶ ಇದೆ ಎಂದು ಹೇಳಿದರು.
ರಾಜ್ಯ ಬ್ಯಾಸ್ಕೆಟ್‍ಬಾಲ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ವಿಜಯ್ ಎಸ್. ಬಳ್ಳಾರಿ ಮಾತನಾಡಿದರು. ಜಿಲ್ಲಾ ಬ್ಯಾಸ್ಕೆಟ್‍ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಶಿವಕುಮಾರ, ನಿರ್ದೇಶಕರಾದ ಮಂಗಲಾ ಭಾಗವತ್, ಗೀತಾ ಗಡ್ಡಿ ಮತ್ತಿತರರು ಇದ್ದರು.
ಟೂರ್ನಿಯಲ್ಲಿ ಕಲಬುರಗಿಯ ಮೂರು, ಬೀದರ್ ಹಾಗೂ ಬಳ್ಳಾರಿಯ ತಲಾ ಎರಡು ತಂಡಗಳು ಸೇರಿ ಒಟ್ಟು ಏಳು ತಂಡಗಳು ಭಾಗವಹಿಸಿದ್ದವು.
ಜಿಲ್ಲಾ ಬ್ಯಾಸ್ಕೆಟ್‍ಬಾಲ್ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಬ್ಯಾಸ್ಕೆಟ್‍ಬಾಲ್ ಅಸೋಸಿಯೇಷನ್ ವತಿಯಿಂದ ಟೂರ್ನಿ ಹಮ್ಮಿಕೊಳ್ಳಲಾಗಿತ್ತು.