

ಬೀದರ್: ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಅನಿಲ್ ಪನ್ನಾಳೆ ಬೆಂಬಲಿತ ಪೆನಾಲ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಸಂಘದ ಒಟ್ಟು 12 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಪನ್ನಾಳೆ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಮೂರು ಸ್ಥಾನಗಳಲ್ಲಿ ಮಾಜಿ ಶಾಸಕ ನಾರಾಯಣರಾವ್ ಮನ್ನಳ್ಳಿ ಅವರ ಪುತ್ರ ದೀಪಕ್ ಮನ್ನಳ್ಳಿ ನೇತೃತ್ವದ ಪೆನಾಲ್ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಆಯ್ಕೆಯಾದವರಲ್ಲಿ ಸೂರ್ಯಕಾಂತ ವಗದಾಳೆ, ಸಂಗಪ್ಪ ಮಡಕಿ, ರಾವುಸಾಬ್ ಸಾವಜಿ, ಅರುಣರೆಡ್ಡಿ ಪಾಟೀಲ, ರಾಮಲು ಪಾಂಚಾಳ, ಸಂಜುಕುಮಾರ, ಪೂಜಾ ರಾಜಕುಮಾರ, ಶಿವಣ್ಣ ಗೊಂಡ ಹಾಗೂ ಸಂಜು ಅಲಿಯಾಬಾದ್ ಪನ್ನಾಳೆ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ. ದೀಪಕ್ ಮನ್ನಳ್ಳಿ ಪೆನಾಲ್‍ನಿಂದ ದೀಪಕ್ ಮನ್ನಳ್ಳಿ, ಭಾಗ್ಯಲಕ್ಷ್ಮಿ ಧನರಾಜ ಹಾಗೂ ಶರಣಪ್ಪ ಹೊಕ್ರಾಣ ಆಯ್ಕೆಯಾಗಿದ್ದಾರೆ.
ಸಂಘದ ನೂತನ ನಿರ್ದೇಶಕರು ಪನ್ನಾಳೆ ಅವರನ್ನು ಶಾಲು ಹೊದಿಸಿ ಗೌರವಿಸಿದರು. ನೂತನ ನಿರ್ದೇಶಕರು ರೈತರ ಏಳಿಗೆ ಹಾಗೂ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅನಿಲಕುಮಾರ ಪನ್ನಾಳೆ ಕಿವಿಮಾತು ಹೇಳಿದರು.