

ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠ ಗಂಗಾ ಪೂಜೆಯಿಂದಾಗಿ ಗಮನ ಸೆಳೆಯುತ್ತಿದೆ.
ಮಠದಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳಲಾಗುವ 11 ದಿನಗಳ ಸಿದ್ಧರಾಮೇಶ್ವರ ನಮ್ಮೂರ ಜಾತ್ರಾ ಮಹೋತ್ಸವದಲ್ಲಿ ಗಂಗಾ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ಜಾತ್ರೆಯಲ್ಲೂ ನಿತ್ಯ ಗಂಗಾ ಪೂಜೆ ನೆರವೇರುತ್ತಿದೆ.
ಹಿಂದೆ ಬರದಿಂದಾಗಿ ಹಲಬರ್ಗಾ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ಆಗ ಮಠದ ಎರಡನೇ ಪೀಠಾಧಿಪತಿ ಸಿದ್ಧರಾಮೇಶ್ವರರು ತಮ್ಮ ಕೈಯ್ಯಾರೆ 22 ಅಡಿ ಆಳದ ಬಾವಿ ತೋಡಿ ಜನರ ಬಾಯಾರಿಕೆ ನೀಗಿಸಿದ್ದರು. ಬಾವಿಯ ನೀರಿನ ಸೆಲೆ ಇಂದಿಗೂ ಬತ್ತಿಲ್ಲ. ಹೀಗಾಗಿ ಜಾತ್ರೆಯಲ್ಲಿ ಬಾವಿಯ ಗಂಗೆಗೆ ಪ್ರತಿ ವರ್ಷ ಪೂಜೆ ಸಲ್ಲಿಸುತ್ತ ಬರಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ತಿಳಿಸಿದರು.
ದೇಶದಲ್ಲೇ ಕಾಶಿ ಗಂಗಾ ಪೂಜೆಗೆ ಹೆಸರಾಗಿದೆ. ಜಿಲ್ಲೆಯಲ್ಲಿ ಗಂಗಾ ಪೂಜೆ ನಡೆಯುವುದು ಹಲಬರ್ಗಾ ಮಠದಲ್ಲಿ ಮಾತ್ರ ಎಂದು ಹೇಳಿದರು.
ಜನವರಿ 1 ರಿಂದ ಆರಂಭವಾದ ಜಾತ್ರೆ 11 ರ ವರೆಗೆ ನಡೆಯಲಿದೆ. ನಿತ್ಯ ಸಂಜೆ ನೂರಾರು ಮುತ್ತೈದೆಯರು ಬಾಯಾರಿಕೆ ನೀಗಿಸುವ ಗಂಗಾ ಮಾತೆಗೆ ಪೂಜೆ ಸಲ್ಲಿಸುತ್ತಿದ್ದಾರೆ. ಜಾತ್ರೆ ಮುಕ್ತಾಯದವರೆಗೂ ಗಂಗಾ ಪೂಜೆ ಜರುಗಲಿದೆ ಎಂದು ತಿಳಿಸಿದರು.
ಅನ್ನ, ನೀರು ಹಾಗೂ ಜ್ಞಾನ ಅಮೂಲ್ಯ ರತ್ನಗಳು. ನೀರಿಲ್ಲದೆ ಭುವಿಯ ಮೇಲೆ ಜೀವ ಸಂಕುಲ ಬದುಕಲು ಸಾಧ್ಯವಿಲ್ಲ. ಹೀಗಾಗಿ ನೀರಿನ ಮಹತ್ವ ಅರಿಯಬೇಕು. ನೀರನ್ನು ಹಿತ ಮಿತವಾಗಿ ಬಳಸಬೇಕು. ಗಂಗಾ ಮಾತೆಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದರು.