ವಿಭಾಗಮಟ್ಟದ ಬ್ಯಾಸ್ಕೆಟ್‍ಬಾಲ್ ಟೂರ್ನಿಗೆ ಚಾಲನೆ

Basketball Tourni - Copy
Published on

ಬೀದರ್: ಎರಡು ದಿನಗಳ ಕಲಬುರಗಿ ವಿಭಾಗಮಟ್ಟದ ಮುಕ್ತ ಬ್ಯಾಸ್ಕೆಟ್‍ಬಾಲ್ ಟೂರ್ನಮೆಂಟ್‍ಗೆ ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ವಿಧ್ಯುಕ್ತ ಚಾಲನೆ ದೊರೆಯಿತು.

ಸಸಿಗೆ ನೀರೆರೆದು ಟೂರ್ನಿಯನ್ನು ಉದ್ಘಾಟಿಸಿದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು, ಪಠ್ಯದ ಜತೆಗೆ ಕ್ರೀಡೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕ್ರೀಡೆಯಲ್ಲಿ ಸಾಧನೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.

ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಶಾಂತ ದೊಡ್ಡಿ ಮಾತನಾಡಿ, ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯಕ ಎಂದು ತಿಳಿಸಿದರು.

ಜಿಲ್ಲಾ ಬ್ಯಾಸ್ಕೆಟ್‍ಬಾಲ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ ತಾಳಂಪಳ್ಳಿ ಮಾತನಾಡಿ, ಬರುವ ದಿನಗಳಲ್ಲಿ ಬೀದರ್‍ನಲ್ಲಿ ರಾಜ್ಯಮಟ್ಟದ ಮಹಿಳಾ ಬ್ಯಾಸ್ಕೆಟ್‍ಬಾಲ್ ಟೂರ್ನಿ ಹಮ್ಮಿಕೊಳ್ಳುವ ಉದ್ದೇಶ ಇದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಬ್ಯಾಸ್ಕೆಟ್‍ಬಾಲ್ ಅಸೋಸಿಯೇಷನ್ ತಾಂತ್ರಿಕ ಅಧಿಕಾರಿ ವೆಂಕಟೇಶ್, ಜಿಲ್ಲಾ ಬ್ಯಾಸ್ಕೆಟ್‍ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಶಿವಕುಮಾರ, ನಿರ್ದೇಶಕಿ ಮಂಗಲಾ ಭಾಗವತ್, ಕಲಬುರಗಿ ಜಿಲ್ಲಾ ಬ್ಯಾಸ್ಕೆಟ್‍ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಡಾ. ಶಂಕರ ಸೂರೆ, ಡಯಟ್ ಉಪನ್ಯಾಸಕಿ ಗೀತಾ ಎಸ್. ಗಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬ್ಯಾಸ್ಕೆಟ್‍ಬಾಲ್ ತರಬೇತುದಾರ ರಾಘವೇಂದ್ರ, ವಾಲಿಬಾಲ್ ತರಬೇತುದಾರ ಜೈಪ್ರಕಾಶ, ನಿವೃತ್ತ ದೈಹಿಕ ಶಿಕ್ಷಕ ಭೀಮಾಶಂಕರ ಮತ್ತಿತರರು ಇದ್ದರು.

ಜಿಲ್ಲಾ ಬ್ಯಾಸ್ಕೆಟ್‍ಬಾಲ್ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಬ್ಯಾಸ್ಕೆಟ್‍ಬಾಲ್ ಅಸೋಸಿಯೇಷನ್ ವತಿಯಿಂದ ಟೂರ್ನಿ ಹಮ್ಮಿಕೊಂಡಿದ್ದು, ಬೀದರ್, ಬಳ್ಳಾರಿಯ ತಲಾ ಎರಡು ಹಾಗೂ ಕಲಬುರಗಿಯ ಮೂರು ತಂಡಗಳು ಸೇರಿ ಒಟ್ಟು ಏಳು ತಂಡಗಳು ಪಾಲ್ಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net