

ಬೀದರ್: ಸಾವಿತ್ರಿಬಾಯಿ ಫುಲೆ ದೇಶದಲ್ಲಿ ಮಹಿಳಾ ಸಾಕ್ಷರತೆಗೆ ಶ್ರಮಿಸಿದ್ದರು ಎಂದು ಕಲಬುರಗಿಯ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ಹೇಳಿದರು.
ನಗರದ ಜೀಜಾಮಾತಾ ಶಿಕ್ಷಣ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
19ನೇ ಶತಮಾನದಲ್ಲೇ ಶಾಲೆಗಳನ್ನು ಆರಂಭಿಸಿ, ಅಕ್ಷರ ಕಲಿಸಿದ್ದರು. ಅಂದಿನ ಬ್ರಿಟಿಷ್ ಸರ್ಕಾರ ಅವರನ್ನು ಭಾರತದ ಮೊದಲ ಶಿಕ್ಷಕಿಯೆಂದು ಪ್ರಶಸ್ತಿ ನೀಡಿ, ಗೌರವಿಸಿತು ಎಂದು ತಿಳಿಸಿದರು.
ಅಮೋಘ ಸಾಧನೆ ಮಾಡಿದ್ದಕ್ಕಾಗಿ ಸಾವಿತ್ರಿಬಾಯಿ ಅವರನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದೇವೆ. ಮಹಿಳೆಯರಿಗೆ ಅವರ ಸಾಧನೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣಕ್ಕೆ ಸಂಕಲ್ಪ ತೊಟ್ಟಿದ್ದರು. ಎಷ್ಟೇ ಪ್ರತಿಕೂಲ ಪರಿಸ್ಥಿತಿ ಎದುರಾದರೂ ಅದರಿಂದ ಹಿಂದೆ ಸರಿಯಲಿಲ್ಲ. ಅಂದುಕೊಂಡಿದ್ದನ್ನು ಮಾಡಿ ತೋರಿದ್ದರು ಎಂದು ಅಂಚೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ತಿಳಿಸಿದರು.
ಸಾವಿತ್ರಿಬಾಯಿ ಫುಲೆ ಅವರ ಯಶಸ್ಸಿನಲ್ಲಿ ಅವರ ಪತಿಯ ಪಾತ್ರ ಬಹಳ ಮಹತ್ವದ್ದಾಗಿತ್ತು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾಯದರ್ಶಿ ಪ್ರಭುಲಿಂಗ ತೂಗಾವೆ ಹೇಳಿದರು.
ಸಾವಿತ್ರಿಬಾಯಿ ಫುಲೆ ಪ್ಲೆಗ್ ಮಹಾಮಾರಿ ಸಂದರ್ಭದಲ್ಲೂ ಹೆದರದೆ ಶೈಕ್ಷಣಿಕ ಸೇವೆ ಮುಂದುವರಿಸಿದ್ದರು ಎಂದು ಜಿಲ್ಲಾ ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘದ ಅಧ್ಯಕ್ಷೆ ಸಾರಿಕಾ ಗಂಗಾ ಸ್ಮರಿಸಿದರು.
ಎಸ್.ಸಿ.ಎಸ್. ಸಮಿತಿಯ ಕಾರ್ಯದರ್ಶಿ ಸತೀಶಕುಮಾರ ಮುಳೆ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ಭಟ್ಟ ಲೋಕೇಶ್ವರ, ಜೀಜಾಮಾತಾ ಕನ್ಯಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ, ಜೀಜಾಮಾತಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಅರ್ಜುನ ಧೂಳೆ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವಾಸುದೇವ ರಾಠೋಡ್, ಶಿಕ್ಷಕರಾದ ರಾಜಕುಮಾರ ಗಾದಗೆ, ಅನಿಲಕುಮಾರ ಟೆಕೋಳೆ, ಮಲ್ಲಿಕಾರ್ಜುನ ಬಂಬುಳಗೆ, ಆನಂದ ಜಾಧವ್, ಉಷಾ ಪಾಟೀಲ, ನಾಗರತ್ನ, ಲತಾ, ಸಂಜಯ್ ಪಾಟೀಲ, ಬಸವರಾಜ, ಕುಮಾರಸ್ವಾಮಿ, ವಿವೇಕ ಪಾಟೀಲ ಮತ್ತಿತರರು ಇದ್ದರು. ತಾನಾಜಿ ನಿರಗುಡೆ ನಿರೂಪಿಸಿದರು. ಭೀಮಶ್ಯಾ ಸ್ವಾಗತಿಸಿದರು.