

ಬೀದರ್: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಲಬುರಗಿಯ ಕಾಂಗ್ರೆಸ್ ಮುಖಂಡ ರಾಜು ಕಪನೂರ ವಿರುದ್ಧ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ದಲಿತ ಸಂಘಟನೆಗಳ ಒಕ್ಕೂಟ ಮುಖಂಡ ಚಂದ್ರಕಾಂತ ನಿರೋಟೆ ಹೇಳಿದರು.
ಭಾಲ್ಕಿ ತಾಲೂಕಿನ ಕಟ್ಟಿ ತೂಗಾಂವ ಗ್ರಾಮದ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ ರಾಜಕೀಯವಾಗಿ ಬಳಸಿಕೊಂಡು ಸಚಿವ ಖರ್ಗೆ ಅವರನ್ನು ಮೂಲೆಗುಂಪು ಮಾಡುವ ಹುನ್ನಾರ ಬಿಜೆಪಿ ಮಾಡುತ್ತಿದ್ದು, ಇದಕ್ಕೆ ಖಂಡಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಖಾಸಗಿ ಕಂಪನಿಯೊಂದರಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಸಚಿನ್, ಟೆಂಡರ್ ವಿಷಯದಲ್ಲಿ ನನಗೆ ಕಿರಕುಳ ನೀಡಿದ್ದಾರೆಂದು ಎಂಟು ಜನರ ಹೆಸರಿನಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಒಳ್ಳೆಯ ಬೆಳವಣೆ ಇಲ್ಲ. ಆತ್ಮಹತ್ಯೆಗೂ ಮುನ್ನ ಸಚಿನ್ ಸಾಮಾಜಿಕ ತಾಲತಾಣದಲ್ಲಿ ಡೆತ್ನೋಟ್ ಅಪ್ ಲೋಡ್ ಮಾಡಿದ್ದನ್ನು ಗಮನಿಸಿ ರಾಜು ಕಪನೂರ ಅನಾಹುತ ಆಗದಂತೆ ತಪ್ಪಿಸಲು ಕಲಬುರಗಿ ನಗರದ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಬಿಜೆಪಿಯವರು ಸಾವಿನ ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಟೆಂಡರ್ ಕೊಡಿಸುವ ವಿಷಯದಲ್ಲಿ ಕಪನೂರ್ 58.77 ಲಕ್ಷ ರೂ. ಸಚಿನ್ ಗೆ ನೀಡಿದ್ದಾರೆ. ಟೆಂಡರ್ ನೀಡಿದ ಕಾರಣ ಕೊಟ್ಟ ಹಣವನ್ನು ನೀಡುವಂತೆ ಕಪನೂರ ಅವರು ಬೀದರ್ ನಲ್ಲಿರುವ ಸಚಿನ್ ಮನೆಗೆ ತೆರಳಿ ಕೇಳಿದ್ದಾರೆ. ಇದರ ಸತ್ಯ ಅರಿಯದೆ ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದಾರೆ. ಸಿಐಡಿ ತನಿಖೆ ನಡೆದರೆ ಎಲ್ಲ ಸತ್ಯವನ್ನು ಹೊರಬೀಳಲಿದೆ. ಆತ್ಮಹತ್ಯೆ ಹಿಂದಿರುವ ಕಾಣದ ಕೈಗಳು ಯಾರು ಎಂಬುದನ್ನು ಪತ್ತೆಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಸಚಿನ್ ಆತ್ಮಹತ್ಯೆಯಲ್ಲಿ ಸಚಿವ ಖರ್ಗೆ ಕೈವಾಡ ಇಲ್ಲ. ಆದರೂ ಖರ್ಗೆ ನಿವಾಸಕ್ಕೆ ಜ.4ರಂದು ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ಹೇಳಿದೆ. ಒಂದು ವೇಳೆ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಿದರೆ ಜಿಲ್ಲೆಯ ಬಿಜೆಪಿ ಶಾಸಕರ ಮನೆಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಮುಖಂಡರಾದ ರಾಜಕುಮಾರ ಮೂಲಭಾರತಿ, ಮಹೇಶ ಗೋರನಾಳಕರ್, ವಿಷ್ಣುವರ್ಧನ ವಾಲ್ದೊಡ್ಡಿ, ರಾಜಕುಮಾರ ಗುನ್ನಳ್ಳಿ, ಸಂತೋಷ ಏಣಕೂರೆ, ಅಮೃತ ಮುತ್ತಂಗಿಕರ್, ಬಾಬು ಕೌಠಾ, ಸುರೇಶ ಘಾಂಗರೆ ಇತರರಿದ್ದರು.