ಸಚಿನ್ ಕೇಸ್ ಸಿಐಡಿ ಬೇಡ ಸಿಬಿಐಗೆ ಕೊಡಿ

vishwakarma mahasabha protest
Published on

ಬೀದರ್: ಭಾಲ್ಕಿ ತಾಲೂಕಿನ ಕಟ್ಟಿ ತೂಗಾಂವ ಗ್ರಾಮದ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ, ಆತ್ಮಹತ್ಯೆ ಘಟನೆ ನಡೆದು ಆರು ದಿನ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ. ಸರ್ಕಾರ ಮತ್ತು ಪೊಲೀಸರ ಈ ವಿಳಂಬ ನೀತಿ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡ ಸಮುದಾಯದಲ್ಲಿ ಜನಿಸಿದ ಸಚಿನ್ ಉಪಜೀವನಕ್ಕಾಗಿ ಮಾಡುತ್ತಿದ್ದ ವ್ಯವಹಾರದಲ್ಲಿ ಏರುಪೇರಾಗಿ ನಿಗೂಢ ಸಾವಿನಲ್ಲಿ ಅಂತ್ಯವಾಗಿದ್ದಾನೆ. ಸಚಿನ್ ಅವಲಂಬಿತ ಕುಟುಂಬದವರು ಅನಾಥರಾಗಿ ಬೀದಿ ಪಾಲಾಗುವ ಪರಿಸ್ಥಿತಿ ಬಂದಿದೆ. ಈ ಕುಟುಂಬಕ್ಕೆ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದರು.

ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಪೊಲೀಸರು ಹಾಗೂ ಸಿಐಡಿ ತನಿಖೆ ಮೇಲೆ ನಮಗೆ ವಿಶ್ವಾಸವಿಲ್ಲ. ಹೀಗಾಗಿ ಸಿಬಿಐ ತನಿಖೆ ವಹಿಸಿದರೆ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

ಪಾಂಚಾಳ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ, ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಕೂಡಲೇ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಬೇಡಿಕೆ ಸಂಬಂಧ ಗೃಹ ಸಚಿವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

ಸುಲೇಪೇಟನ ವಿಶ್ವಕರ್ಮ ಏಕದಂಡಿಗೆ ಮಠದ ಶ್ರೀ ದೊಡ್ಡೆಂದ್ರ ಸ್ವಾಮೀಜಿ, ಮಹಾಸಭಾ ಜಿಲ್ಲಾಧ್ಯಕ್ಷ ದತ್ತಾತ್ರಿ ವಿಶ್ವಕರ್ಮ, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರಶಾಂತ ವಿಶ್ವಕರ್ಮ, ಪ್ರಮುಖರಾದ ಅಶೋಕ ಪೊದ್ದಾರ್, ಜೈಪ್ರಕಾಶ ಪೊದ್ದಾರ್, ಸೋಮನಾಥ ಪಾಂಚಾಳ, ರಾಜಕುಮಾರ ಪಾಂಚಾಳ, ಕೃಷ್ಣಾಚಾರಿ, ಸೂಲೊಚನಾ ಜಿ.ವಿಶ್ವಕರ್ಮ, ಸ್ವರೂಪಾ ವಿಶ್ವಕರ್ಮ, ಲಲಿತಾ ವಿಶ್ವಕರ್ಮ, ಪದ್ಮಾವತಿ ವಿಶ್ವಕರ್ಮ, ರಾಜೇಶ್ವರಿ ವಿಶ್ವಕರ್ಮ, ರಾಜಕುಮಾರ ಪಾಂಚಾಳ, ವಿಜಯಕುಮಾರ ಪಾಂಚಾಳ, ಪಾಂಡುರಂಗ, ರಮೇಶ ಪಂಚಾಳ, ಬಾಬುರಾವ, ಮಹಾದೇವ, ಸಚಿನ್, ರೂಪೇಶ್, ವೀರೇಶ ಪಾಂಚಾಳ, ಪ್ರಶಾಂತ, ವಿಶಾಲ ಪಂಚಾಳ, ಸುನೀಲ ಪಾಂಚಾಳ, ಶಾಮರಾವ ಪಾಂಚಾಳ, ಸಿದ್ದಾರೂಢ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net