

ಬೀದರ್: ರಾಜ್ಯದಲ್ಲಿ ನಿರುದ್ಯೋಗಿಯಾದ ಬಿಜೆಪಿಯವರಿಗೆ ಯಾವುದೇ ಕೆಲಸ ಇಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಾಂಚಾಳ ಸಾವಿನಲ್ಲೂ ರಾಜಕೀಯ ಮಾಡುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಆರೋಪಿಸಿದ್ದಾರೆ.
ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದು ಸರಿಯಲ್ಲ. ಅವಲಂಬಿತ ಕುಟುಂಬಕ್ಕೆ ಅನ್ಯಾಯ ಮಾಡಿದಂತಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯವರ ಮನೆಯ ದೇವರು ಇದ್ದಂತೆ. ಅವರನ್ನು ಸ್ಮರಿಸಲು ಆಗದಿದ್ದರೆ ಅವರಿಗೆ ಬದುಕಲು ಆಗುವುದಿಲ್ಲ ಮತ್ತು ಅನ್ನ ಸಹ ಜೀರ್ಣ ಆಗಲ್ಲ. ದೇಶದಲ್ಲಿ ಡಾ.ಮಲ್ಲಿಕಾಜರ್ುನ ಖರ್ಗೆ, ರಾಜ್ಯದಲ್ಲಿ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ಭ್ರಷ್ಟಾಚಾರ, ದುರಾಚಾರಗಳನ್ನು ಬಯಲಿಗೆಳೆದು ಬಣ್ಣ ಬಯಲು ಮಾಡುತ್ತಿದ್ದಾರೆ. ಹೀಗಾಗಿ ನಿತ್ಯವೂ ಖರ್ಗೆ ಹೆಸರು ಜಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಸಚಿವ ಖರ್ಗೆ ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಬೇಕು? ತಪ್ಪು ಮಾಡದ ಅವರು ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ, ಸಚಿನ್ ಪ್ರಕರಣದಲ್ಲಿ ಖರ್ಗೆ ಹೆಸರು ಎಲ್ಲೂ ಪ್ರಸ್ತಾಪ ಇಲ್ಲ. ವಿನಾಃಕಾರಣ ಅವರ ಹೆಸರು ಎಳೆದು ತಂದು ರಾಜಕೀಯ ಮಾಡುತ್ತಿದ್ದಾರೆ. ಅವರ ಆಪ್ತ ರಾಜು ಕಪನೂರ ಈ ಪ್ರಕರಣದಲ್ಲಿ ಇದ್ದಾರೆಂಬ ಮಾತ್ರಕ್ಕೆ ಖರ್ಗೆ ರಾಜೀನಾಮೆ ಕೊಡಬೇಕಾ ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.