ಜಾನುವಾರು, ಕುಕ್ಕುಟ ಮೇಳಕ್ಕೆ ಸಿದ್ಧತೆ

Pasu vv mela
Published on

ಬೀದರ್: ನಗರದ ಹೊರವಲಯದ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ 17ರಿಂದ ಮೂರು ದಿನ ವಿವಿ ಸಂಸ್ಥಾಪನಾ ದಿನ ನಿಮಿತ್ತ ಜಾನುವಾರು, ಕುಕ್ಕುಟ ಮತ್ತು ಮೀನುಗಾರಿಕೆ ಮೇಳ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಅದ್ದೂರಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪಶು ವೈದ್ಯಕೀಯ ಮಹಾವಿದ್ಯಾಲಯ ಡೀನ್ ಡಾ.ಎಂ.ಕೆ. ತಾಂದಳೆ ಹೇಳಿದರು.

ನಗರದಲ್ಲಿ ಆಯೋಜಿಸಿದ್ದ ಮೇಳದ ಭಿತ್ತಿಪತ್ರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ಅವರು, ಮೂರು ದಿನ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ರೈತರಿಗೆ ನವೀನ ತಂತ್ರಜ್ಞಾನ ಪರಿಚಯಿಸುವ ಜತೆಗೆ ಪಶುಪಾಲನೆ, ಕುಕ್ಕುಟ ಮತ್ತು ಮೀನುಗಾರಿಕೆಯಲ್ಲಿ ಹೆಚ್ಚಿನ ಲಾಭದ ಬಗ್ಗೆ ಅರಿಯಲು ಮೇಳ ಪ್ರೇರಣೆಯಾಗಲಿದೆ. ರಾಜ್ಯದ ವಿವಿಧೆಡೆಯಿಂದ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಮೇಳದಲ್ಲಿ ಶ್ವಾನ, ಸಣ್ಣ ಮತ್ತು ಮುದ್ದು ಪ್ರಾಣಿ, ಜಾನುವಾರು ತಳಿ, ಅಲಂಕಾರಿಕ ಮೀನು, ಮೌಲ್ಯರ್ವತ ಹಾಲು ಮತ್ತು ಅದರ ಉತ್ಪನ್ನ, ಕುರಿ ಮತ್ತು ಆಡು ಮುಂತಾದ ಪ್ರಾಣಿಗಳ ವೈವಿಧ್ಯಮಯ ಪ್ರದರ್ಶನ ಪ್ರಮುಖ ಆಕರ್ಷಣೆಗಳಾಗಿವೆ. ಪಶುಪಾಲನೆ, ಮೀನುಗಾರಿಕೆ ಮತ್ತು ಸಾವಯವ ಕೃಷಿಯ ಉನ್ನತ ತಂತ್ರಜ್ಞಾನಗಳನ್ನು ಪರಿಚಯಿಸಿ ರೈತರ ಆರ್ಥಿಕ ಸ್ಥಿತಿ ಸುಧಾರಿಸುವುದು ಮೇಳದ ಉದ್ದೇಶ ಎಂದು ತಿಳಿಸಿದರು.

ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ನರಸಪ್ಪ ದೇವಗೊಂಡ ಮಾತನಾಡಿ, ಮೇಳಕ್ಕೆ ಬೇಕಾಗುವ ಎಲ್ಲ ಸಹಕಾರ, ಸಹಾಯ ಇಲಾಖೆಯಿಂದ ಮಾಡಲಾಗುವುದು ಎಂದು ಹೇಳಿದರು.

ಪಶು ವಿವಿ ವಿಸ್ತರ್ಣಾ ನಿರ್ದೇಶಕ ಡಾ.ಬಸವರಾಜ ಅವಟಿ ಮಾತನಾಡಿದರು. ಮೇಳದ ಪ್ರಚಾರ ಸಮಿತಿ ಅಧ್ಯಕ್ಷ ಚನ್ನಪ್ಪ ಗೌಡ ಬಿರಾದಾರ್, ಡಾ.ಬಿ.ವಿ. ಶಿವಪ್ರಕಾಶ ಡಾ.ದಿಲೀಪಕುಮಾರ, ಡಾ.ಗೌತಮ ಅರಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net