

ಬೀದರ್: ಬೊಮ್ಮಗೊಂಡೇಶ್ವರ ತತ್ವ, ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು.
ತಾಲ್ಲೂಕಿನ ಬರಿದಾಬಾದ್ ಗ್ರಾಮದಲ್ಲಿ ಗುರುವಾರ ನೂತನ ಬೊಮ್ಮಗೊಂಡೇಶ್ವರ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೊಮ್ಮಗೊಂಡೇಶ್ವರರು ದೈವಿ ಪುರುಷರಾಗಿದ್ದರು. ಕಾಯಕ ನಿಷ್ಠೆಗೆ ಹೆಸರಾಗಿದ್ದರು. ಸಮಾಜದ ಉದ್ಧಾರಕ್ಕೆ ಶ್ರಮಿಸಿದ್ದರು ಎಂದು ತಿಳಿಸಿದರು.
ಜೀವನ ನಶ್ವರ. ಬಹಳ ಕಠಿಣವಲ್ಲ. ಹೀಗಾಗಿ ಸರಳವಾಗಿ ಬದುಕಲು ಕಲಿಯಬೇಕು. ಹೆಚ್ಚು ಸಂಪಾದನೆಯ ಹಪಾಹಪಿತನ ಬಿಡಬೇಕು. ಇದ್ದುದ್ದರಲ್ಲೇ ಸಂತೃಪ್ತಿ ಪಡಬೇಕು ಎಂದು ಹೇಳಿದರು.
ಮಹಾ ಪುರುಷರ ಜೀವನ ಚರಿತ್ರೆ ಪುಸ್ತಕ ಓದಬೇಕು. ಅವರಂತೆ ಬದುಕಲು ಪ್ರಯತ್ನಿಸಬೇಕು. ನಿತ್ಯ ದೇವರ ಸ್ಮರಣೆ, ಜಪ, ತಪ, ಧ್ಯಾನ ಮಾಡಬೇಕು ಎಂದು ತಿಳಿಸಿದರು.
ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬಿತ್ತಬೇಕು. ಸತ್ಪ್ರಜೆಯಾಗಲು ಅವರಿಗೆ ಪ್ರೇರಣೆ ನೀಡಬೇಕು ಎಂದರು.
ಪ್ರಮುಖರಾದ ಚಂದ್ರಕಾಂತ ನದ್ದೆಕರ್, ಗೋಪಾಲ್ ನದ್ದೆಕರ್, ಮಾಣಿಕ ನದ್ದೆಕರ್, ಅಶೋಕ್ ನದ್ದೆಕರ್, ರಾಜಶೇಖರ ಮಾಳಗೊಂಡ, ಪ್ರಭು ಓಲಿ, ರಾಮಶೆಟ್ಟಿ ಮಾಳಗೊಂಡ, ವಿಜಯಕುಮಾರ ಮೇತ್ರೆ, ಹಣಮಂತ ಪಾಟೀಲ ಚಿಟ್ಟಾ ಮತ್ತಿತರರು ಪಾಲ್ಗೊಂಡಿದ್ದರು.