ಸಿದ್ಧರಾಮೇಶ್ವರ ಜಾತ್ರೆ, ದ್ವಾದಶ ಪಟ್ಟಾಧಿಕಾರ ಮಹೋತ್ಸವ ಜ.1ಕ್ಕೆ

5. Havgilingeshwar Shivacharya
Published on

ಬೀದರ್: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಜ. 1 ರಿಂದ 11 ರ ವರೆಗೆ ಸಿದ್ಧರಾಮೇಶ್ವರ ನಮ್ಮೂರ 12ನೇ ಜಾತ್ರೆ ಹಾಗೂ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಜಾತ್ರೆ ಪ್ರಯುಕ್ತ ಮಠದಲ್ಲಿ ನಿತ್ಯ ರಾಚೋಟೇಶ್ವರ ಕತರ್ುೃ ಗದ್ದುಗೆಗೆ ರುದ್ರಾಭಿಷೇಕ ಪೂಜೆ, ಸಂಜೆ ಸುಮಂಗಲೆಯರಿಂದ ಗಂಗಾ ಪೂಜೆ, ರಾತ್ರಿ ಧರ್ಮಸಭೆ ಹಾಗೂ ಅನ್ನ ದಾಸೋಹ ನಡೆಯಲಿದೆ.

ಬುಧವಾರ ರಾತ್ರಿ 8ಕ್ಕೆ ನಡೆಯುವ ಸಮಾರಂಭದಲ್ಲಿ ಸಂಸದ ಸಾಗರ್ ಖಂಡ್ರೆ ಜಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಹಾನಗಲ್ ಕುಮಾರ ಶಿವಯೋಗಿಗಳ ನೂತನ ಮೂರ್ತಿಯ ಅನಾವರಣವನ್ನೂ ಮಾಡಲಿದ್ದಾರೆ. ಭಾತಂಬ್ರಾದ ಶಿವಯೋಗೀಶ್ವರ ಸ್ವಾಮೀಜಿ ಸಾನಿಧ್ಯ ಹಾಗೂ ಹಾವಗಿಲಿಂಗೇಶ್ವರ ಶಿವಾಚಾರ್ಯ ನೇತೃತ್ವ ವಹಿಸಲಿದ್ದಾರೆ.

ಜ. 7 ರಂದು ಬೆಳಿಗ್ಗೆ 9.30ಕ್ಕೆ ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ದ್ವಾದಶ ಪಟ್ಟಾಧಿಕಾರ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ರಾತ್ರಿ 9.30ಕ್ಕೆ ಮಠದಲ್ಲಿ ನಿರ್ಮಿಸಿದ ನೂತನ ಶ್ರೀ ಸೋಮೇಶ್ವರ ನಿವಾಸವನ್ನು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸಲಿದ್ದಾರೆ.

ಜ. 8 ರಂದು ಬೆಳಿಗ್ಗೆ 10ಕ್ಕೆ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಹಾವಗಿಲಿಂಗೇಶ್ವರ ಶ್ರೀಗಳ ದ್ವಾದಶ ಪಟ್ಟಾಧಿಕಾರ ಮಹೋತ್ಸವ, ಬೆಳಿಗ್ಗೆ 11.30ಕ್ಕೆ ಧರ್ಮಸಭೆ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಭೆಯನ್ನು ಉದ್ಘಾಟಿಸಲಿದ್ದಾರೆ.

ಜ. 9 ರಂದು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಜ. 10 ರಂದು ದ್ವಾದಶ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಮಠದ ಶ್ರೀಗಳ ಪೀಠಾರೋಹಣ ಹಾಗೂ ಬೆಳ್ಳಿ ಕಿರೀಟ ಧಾರಣೆ ನಡೆಯಲಿದೆ.

ಜ. 11 ರಂದು ಬೆಳಿಗ್ಗೆ 10.30ಕ್ಕೆ ಗ್ರಾಮದಲ್ಲಿ 12 ಪೂಜ್ಯರ ಮೆರವಣಿಗೆ ಜರುಗಲಿದೆ. ನಂತರ ಮಂಟಪ ಪೂಜೆ ನಡೆಯಲಿದೆ. ಅನಂತರ ಧರ್ಮಸಭೆ ಜರುಗಲಿದ್ದು, ಮಠಾಧೀಶರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಲಿದ್ದಾರೆ.

ಜಾತ್ರೆಯ ಅಂಗವಾಗಿ ಮಠಕ್ಕೆ ಸುಣ್ಣ, ಬಣ್ಣ ಬಳಿಯಲಾಗಿದೆ. ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಗ್ರಾಮದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ.

ಆಧ್ಯಾತ್ಮಿಕ ಚಟುವಟಿಕೆ ತಾಣ ಹಲಬರ್ಗಾ ಮಠ

ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದ ಆಧ್ಯಾತ್ಮಿಕ ಚಟುವಟಿಕೆಗಳ ತಾಣವಾಗಿದೆ.

12 ವರ್ಷಗಳ ಹಿಂದೆ ಕಿರಿದಾಗಿದ್ದ ಮಠ ಹಾವಗಿಲಿಂಗೇಶ್ವರ ಶ್ರೀಗಳ ಸಂಕಲ್ಪ ಹಾಗೂ ಪರಿಶ್ರಮದಿಂದಾಗಿ ವಿಶಾಲ ಮಠವಾಗಿ ಬದಲಾಗಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾದರಿ ಮಠವಾಗಿ ಗಮನ ಸೆಳೆಯುತ್ತಿದೆ.

ಶ್ರೀ ಸೋಮೇಶ್ವರ ನಿವಾಸ ಹಾಗೂ ಹಾನಗಲ್ ಕುಮಾರ ಶಿವಯೋಗಿಗಳ ನೂತನ ಮೂರ್ತಿ ಮಠಕ್ಕೆ ಹೊಸ ಸೇರ್ಪಡೆಯಾಗಿವೆ.

ಮಠದ ನೆಲಮಾಳಿಗೆಯಲ್ಲಿ ರಾಚೋಟೇಶ್ವರ, ಕುಮಾರ ಶಿವಯೋಗಿಗಳ ಮೂರ್ತಿಗಳಿವೆ. ಶಿವನ ಮೂರ್ತಿ ಒಳಗೊಂಡ ಅಂದದ ಉದ್ಯಾನವೂ ಇದೆ.

ಮೊದಲ ಮಹಡಿಯಲ್ಲಿ ಆಧ್ಯಾತ್ಮಿಕ ಧ್ಯಾನ ಮಂದಿರ ಇದೆ. ಎರಡನೇ ಮಹಡಿಯಲ್ಲಿ ಸುಸಜ್ಜಿತ ಶ್ರೀ ಸೋಮೇಶ್ವರ ನಿಲಯವಿದೆ.

ಹಾವಗಿಲಿಂಗೇಶ್ವರ ಶ್ರೀ ನಾಲ್ಕನೇ ಪೀಠಾಧಿಪತಿ

ಐನೂರು ವರ್ಷಗಳ ಇತಿಹಾಸದ ರಾಚೋಟೇಶ್ವರ ಮಠಕ್ಕೆ ಈವರೆಗೆ ನಾಲ್ವರು ಪೀಠಾಧಿಪತಿಗಳಾಗಿದ್ದಾರೆ. ಹಾವಗಿಲಿಂಗೇಶ್ವರ ಶಿವಾಚಾರ್ಯರು ನಾಲ್ಕನೆಯವರು.

ಮಠ ಸ್ಥಾಪಿಸಿದ ರಾಚೋಟೇಶ್ವರರು ಮೊದಲ ಪೀಠಾಧಿಪತಿ. ಅವರು ಮಠಕ್ಕೆ ಬಂದ ಭಕ್ತರ ಸಂಕಷ್ಟ ಪರಿಹರಿಸುತ್ತಿದ್ದರು. ಮಳೆ ಬಾರದಿದ್ದಾಗ ಅನುಷ್ಠಾನದ ಮೂಲಕ ವರುಣನ ಕೃಪೆ ಆಗುವಂತೆ ಮಾಡುತ್ತಿದ್ದರು.

ಎರಡನೇ ಪೀಠಾಧಿಪತಿಯಾಗಿದ್ದ ಸಿದ್ಧರಾಮೇಶ್ವರರು ಬರಗಾಲದ ಕಾರಣ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಉಂಟಾದಾಗ, ತಮ್ಮ ಕೈಯ್ಯಾರೆ ಬಾವಿ ತೋಡಿ, ಜನರ ಬಾಯಾರಿಕೆ ನೀಗಿಸಿದ್ದರು. ಆ ಬಾವಿಯಲ್ಲಿ ಇಂದಿಗೂ ನೀರಿನ ಸೆಲೆ ಬತ್ತಿಲ್ಲ. ನಂತರ ಅಧಿಕಾರ ವಹಿಸಿಕೊಂಡವರು ಕರಿಬಸವೇಶ್ವರ ಶಿವಯೋಗಿಗಳು. ಹಾಲಿ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಮಠವನ್ನು ಮಾದರಿಯಾಗಿ ರೂಪಿಸಿದ ಶ್ರೇಯ ಅವರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net