ಆನ್‍ಲೈನ್ ಔಷಧ ಮಾರಾಟ ತಡೆಗೆ ಆಗ್ರಹ

Shivaraj Patil - Copy
Published on

ಬೀದರ್: ಆನ್‍ಲೈನ್ ಮೂಲಕ ಔಷಧ ಮಾರಾಟ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಬೀದರ್ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಆಗ್ರಹಿಸಿದೆ.

ಕೋವಿಡ್ ವೇಳೆ ನೀಡಿದ್ದ ವಿಶೇಷ ಅನುಮತಿಯನ್ನು ಆನ್‍ಲೈನ್ ಔಷಧ ಮಾರಾಟ ವೇದಿಕೆಗಳು ದುರುಪಯೋಗ ಪಡೆಸಿಕೊಳ್ಳುತ್ತಿವೆ ಎಂದು ಸಂಘದ ಅಧ್ಯಕ್ಷ ಶಿವರಾಜ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಖಾಲೇದ್ ಷರೀಫ್ ಆರೋಪಿಸಿದ್ದಾರೆ.

ಸ್ವಿಗ್ಗಿ ಹಾಗೂ ಇತರ ಆನ್‍ಲೈನ್ ವೇದಿಕೆಗಳು ಔಷಧಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ನಿಯಮಗಳನ್ನು ಉಲ್ಲಂಘಿಸುತ್ತಿವೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಔಷಧಗಳನ್ನು ಮನೆ ಬಾಗಿಲಿಗೆ ಪೂರೈಸುತ್ತಿವೆ. ಇದು, ರೋಗಿಗಳು ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆಪಾದಿಸಿದ್ದಾರೆ.

ಆನ್‍ಲೈನ್ ಮೂಲಕ ಔಷಧ ಮಾರಾಟವನ್ನು ಕೂಡಲೇ ತಡೆಯಬೇಕು. ಆನ್‍ಲೈನ್ ಔಷಧ ಮಾರಾಟಕ್ಕೆ ನೀಡಿದ್ದ ಪರವಾನಗಿಯನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಆಲ್ ಇಂಡಿಯಾ ಆರ್ಗನೈಝೇಷನ್ ಆಫ್ ಕೆಮಿಸ್ಟ್ಸ್ ಆ್ಯಂಡ್ ಡ್ರಗ್ಗಿಸ್ಟ್ಸ್ ಹಾಗೂ ಕರ್ನಾಟಕ ಸ್ಟೇಟ್ ಕೆಮಿಸ್ಟ್ಸ್ ಆ್ಯಂಡ್ ಡ್ರಗ್ಗಿಸ್ಟ್ಸ್ ಅಸೋಸಿಯೇಷನ್‍ನ 12.40 ಲಕ್ಷ ಸದಸ್ಯರು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net