

ಔರಾದ್: ಸಂತಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಪ್ರಭು ಚವ್ಹಾಣ್ ದಿಢೀರ್ ಭೇಟಿ ನೀಡಿ ಅವ್ಯವಸ್ಥೆ ನೋಡಿ ಆಕ್ರೋಶ ವ್ಯಕ್ತಪಡಿಸಿದರು.
ಬಾಲಕ ಮತ್ತು ಬಾಲಕಿಯರ ವಸತಿನಿಲಯ, ತರಗತಿ ಕೋಣೆಗಳು, ಶೌಚಗೃಹ ಸೇರಿ ಎಲ್ಲ ಕಡೆ ಸಂಚರಿಸಿ ವ್ಯವಸ್ಥೆಯನ್ನು ಗಮನಿಸಿದರು. ಊಟದ ಕೋಣೆಗೆ ತೆರಳಿ ಮಕ್ಕಳೊಂದಿಗೆ ಕುಳಿತು ಅಡುಗೆ ರುಚಿ ಮತ್ತು ಗುಣಮಟ್ಟ ಪರೀಕ್ಷಿಸಿದರು. ಅರೆಬೆಂದ ಚಪಾತಿ, ಕಳಪೆ ಅಕ್ಕಿಯಿಂದ ಬೇಯಿಸಿದ ಅನ್ನವನ್ನು ಕಂಡು ಸಿಬ್ಬಂದಿ ವಿರುದ್ಧ ಸಿಡಿಮಿಡಿಗೊಂಡರು. ನಿತ್ಯ ಅಡುಗೆ ಹೀಗೆಯೇ ಇರುತ್ತದೆಯೇ ಎಂದು ಮಕ್ಕಳನ್ನು ಪ್ರಶ್ನಿಸಿದರು. ಈ ಬಾರಿ ಬಂದ ಗೋಧಿ ಸರಿಯಿಲ್ಲ. ಹೀಗಾಗಿ ಚಪಾತಿ ಸರಿಯಾಗಿ ಆಗುತ್ತಿಲ್ಲ ಎಂದು ಅಡುಗೆ ಸಿಬ್ಬಂದಿ ತಿಳಿಸಿದರು.
ನಿಮ್ಮ ಮೇಲೆ ಭರವಸೆಯಿಟ್ಟು ಪಾಲಕರು ಮಕ್ಕಳನ್ನು ವಸತಿ ನಿಲಯಕ್ಕೆ ಕಳುಹಿಸುತ್ತಾರೆ. ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡಬೇಕು. ಆಹಾರವನ್ನು ಸರಿಯಾಗಿ ಬೇಯಿಸಬೇಕು. ಊಟದ ಸ್ಥಳ ಶುಚಿಯಾಗಿಡಬೇಕು ಎಂದು ಸೂಚಿಸಿದರು.
ಹಾಸ್ಟೆಲ್ ಗೆ ಪೂರೈಕೆಯಾಗುತ್ತಿರುವ ಗೋಧಿ, ಜೋಳ, ಅಕ್ಕಿ ಸೇರಿ ಎಲ್ಲ ಆಹಾರ ಸಾಮಗ್ರಿ ಕಳಪೆ ಕಾಣಿಸುತ್ತಿದೆ. ಹೀಗಾಗಿ ಪೂರೈಕೆದಾರರನ್ನು ಕೂಡಲೇ ಬದಲಾಯಿಸಿ ಎಲ್ಲ ವಸತಿ ನಿಲಯಗಳಿಗೆ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿ ಒದಗಿಸಬೇಕು ಎಂದು ಸರ್ಕಾರಕ್ಕೆ ಕೋರುವೆ. ಸಂಬಂಧಿಸಿದ ಅಧಿಕಾರಿಗಳು ವರದಿ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು.
ತರಗತಿ ಕೋಣೆಗಳಿಗೆ ತೆರಳಿ ಪಠ್ಯ ಚಟುವಟಿಕೆ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕರೆದುರು ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು. ತರಗತಿಗಳನ್ನು ಅಚ್ಚುಕಟ್ಟಾಗಿ ನಡೆಸಬೇಕು. ಮಕ್ಕಳಿಗೆ ಥಳಿಸುವುದು, ಗದರಿಸುವುದು ಮಾಡಕೂಡದೆಂದು ಶಿಕ್ಷಕರಿಗೆ ತಾಕೀತು ಮಾಡಿದ ಚವ್ಹಾಣ್, ಎರಡು ತಿಂಗಳಿಗೊಮ್ಮೆ ವಸತಿ ಶಾಲೆಗೆ ಭೇಟಿ ನೀಡುವೆ. ಅವ್ಯವಸ್ಥೆ ಸುಧಾರಿಸಬೇಕೆಂದು ಸೂಚಿಸಿದರು.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದು, ವಸತಿನಿಲಯಗಳಿಗೆ ಎಲ್ಲ ರೀತಿಯ ಸೌಕರ್ಯ ಒದಗಿಸುತ್ತಿದ್ದೇನೆ. ವಸತಿ ಶಾಲೆ ಆವರಣದಲ್ಲಿ ಸಿಸಿ ರಸ್ತೆ, ಬಯಲು ರಂಗಮಂದಿರ ಸೇರಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂದೆ ಏನೇನು ಕೆಲಸಗಳಾಗಬೇಕು ಎಂಬ ಬಗ್ಗೆ ಪಟ್ಟಿ ನೀಡಿದರೆ ಶಾಸಕರ ನಿಧಿಯಿಂದ ಕೆಲಸ ಮಾಡಿಸುವೆ ಎಂದು ಹೇಳಿದರು.
ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಇತರರಿದ್ದರು.
ಶೌಚಗೃಹ ಅವ್ಯವಸ್ಥೆಗೆ ಬೇಸರ
ವಸತಿ ನಿಲಯದಲ್ಲಿರುವ ಶೌಚಗೃಹ ಸರಿಯಾಗಿ ನಿರ್ವಹಣೆ ಮಾಡದಿರುವುಕ್ಕೆ ಸಿಬ್ಬಂದಿ ವಿರುದ್ಧ ಬೇಸರ ವ್ಯಕ್ತಪಡಿಸಿದ ಶಾಸಕ ಪ್ರಭು ಚವ್ಹಾಣ್, ನಲ್ಲಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸಿಂಕ್ಗಳು ಮುರಿದಿವೆ. ಸ್ವಚ್ಛತೆ ಕೊರತೆಯಿಂದ ಗಬ್ಬು ವಾಸನೆ ಬರುತ್ತಿದೆ. ಕೂಡಲೇ ಶೌಚಗೃಹ ಸರಿಪಡಿಸಬೇಕು. ಮತ್ತೊಮ್ಮೆ ಭೇಟಿ ನೀಡಿದಾಗ ಪರಿಸ್ಥಿತಿ ಬದಲಾಗಿರಬೇಕು. ನೂರಾರು ಮಕ್ಕಳಿರುವ ವಸತಿ ಶಾಲೆಗೆ ಕಂಪೌಂಡ್ ಇರಬೇಕು. ನಿರ್ಮಾಣಕ್ಕಿರುವ ತೊಡಕುಗಳನ್ನು ಕೂಡಲೇ ಬಗೆಹರಿಸಿಕೊಂಡು ಕೆಲಸ ಆರಂಭಿಸಬೇಕು ಎಂದರು.