

ಬೀದರ್: ಬಸವ ಸೇವಾ ಪ್ರತಿಷ್ಠಾನ ನಗರದಲ್ಲಿ 2025ರ ಫೆ.10ರಿಂದ ಮೂರು ದಿನ ಆಯೋಜಿಸಿರುವ ವಚನ ವಿಜಯೋತ್ಸವದ ಉದ್ಘಾಟನೆಗೆ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಹಾಗೂ ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಆಹ್ವಾನಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಪೂಜ್ಯ ಗಂಗಾಂಬಿಕೆ ಅಕ್ಕ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇಬ್ಬರನ್ನು ಭೇಟಿಯಾಗಿ ಆಹ್ವಾನ ನೀಡಿದ್ದು, ಬರುವುದಾಗಿ ಒಪ್ಪಿದ್ದಾರೆ. ಬಸವ ತತ್ವ ಪ್ರಚಾರ -ಪ್ರಸಾರ ಉದ್ದೇಶದಿಂದ 2002ರಿಂದ ಚಿನ್ಮಯಜ್ಞಾನಿ ಚನ್ನಬಸವಣ್ಣನವರ ಸ್ಮರಣೋತ್ಸವ ನಿಮಿತ್ತ ಬಸವಗಿರಿಯಲ್ಲಿ ವಚನ ವಿಯೋತ್ಸವ ನಡೆಸಲಾಗುತ್ತಿದೆ. ಈ ಬಾರಿ ಮೂರು ದಿನ ಅದ್ದೂರಿ, ಅರ್ಥಪೂರ್ಣ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸ್ವಾಗತ ಸಮಿತಿಗೆ ಸಚಿವ ಖಂಡ್ರೆ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.