

ಬೀದರ್: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕಬ್ಬು ಬೆಳೆಗಾರರ ಜೀವನಾಡಿಯಾಗಿರುವ ಸಿದ್ಧಸಿರಿ ಸಕ್ಕರೆ ಕಾರ್ಖಾನೆ ಆರಂಭಿಸಲು ಸುಪ್ರೀಂಕೋಟ್೯ ಆದೇಶ ನೀಡಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮುಖಭಂಗ ಆಗಿದೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ಕಾರ್ಖಾನೆ ಬಂದ್ ಮಾಡಲು ಆಡಳಿತ ಯಂತ್ರ ಬಳಸಿಕೊಂಡು ಎಲ್ಲ ಪ್ರಯತ್ನ ನಡೆಸಿದ ಸಿಎಂ, ಸಚಿವ ಖಂಡ್ರೆ ಅವರಿಗೆ ತಕ್ಕ ಪಾಠ ಕಲಿಸಿದಂತಾಗಿದೆ. ಕಾರ್ಖಾನೆಯನ್ನು ಮತ್ತೆ ಆರಂಭಿಸುವ ನಿಟ್ಟಿನಲ್ಲಿ ಯಶಸ್ವಿಯಾದ ಸಂಸ್ಥಾಪಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವ ಈಶ್ವರ ಖಂಡ್ರೆ ಹಾಗೂ ಅವರ ಪರಿವಾರದಿಂದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ) ಮೇಲೆ ಕಣ್ಣು ಬಿದ್ದಿದೆ. ಡಿಸಿಸಿ ಬ್ಯಾಂಕ್ ಮೂಲಕ ಯಾರಿಗೂ ತಿಳಿಸದೆ ಗಡಿಬಿಡಿಯಲ್ಲಿ ಬಿಎಸ್ಎಸ್ಕೆ ಮಾರಾಟಕ್ಕೆ ಹುನ್ನಾರ ನಡೆಸಿದ್ದರು. ಆದರೆ ದೇವರ ದಯೆ ರೈತರು, ಕಾರ್ಮಿಕರ ಮೇಲಿರುವುದರಿಂದ ಬಿಎಸ್ಎಸ್ಕೆ ಮತ್ತು ಸಿದ್ಧಸಿರಿ ಕಾರ್ಖಾನೆಯ ವಿಷಯದಲ್ಲಿ ಒಂದು ಹಂತದಲ್ಲಿ ರೈತರಿಗೆ ಮತ್ತು ಕಾರ್ಮಿಕರಿಗೆ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ.