

ಬೀದರ್: ಭಾಲ್ಕಿ ಪಟ್ಟಣದ ಬಾಲಾಜಿ ನಗರದಲ್ಲಿರುವ ನಿವೇಶನಕ್ಕೆ ನಿರ್ಮಿಸಿದ್ದ ಕಂಪೌಂಡ್ ನೆಲಸಮಗೊಳಿಸಿದ್ದು ಕಾನೂನುಬಾಹಿರ. ನ್ಯಾಯ ಸಿಗದಿದ್ದರೆ ವಿಷಸೇವನೆ ಮಾಡುವುದಾಗಿ ಮರಾಠ ಸಮಾಜದ ಹಿರಿಯ ಮುಖಂಡ, ನಿವೇಶನದ ಮಾಲಿಕ ಯಾದವರಾವ ಕನಸೆ ಎಚ್ಚರಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ (ಸಿಒ) ಸಂಗಮೇಶ ಕಾರಬಾರಿ ಒಂದು ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರೂ ಕೊಡದ್ದಕ್ಕೆ ನೋಟಿಸ್ ಸಹ ನೀಡದೆ ಶನಿವಾರ ಬೆಳಗ್ಗೆ ದಿಢೀರ್ ಆಗಿ ಕಂಪೌಂಡ್ ಒಡೆದಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.
ಜನಸಾಮಾನ್ಯರಿಗೆ ಲಂಚಕ್ಕಾಗಿ ಪೀಡಿಸುತ್ತಿರುವ ಸಿಒ ವಿರುದ್ಧ ಕಾನೂನು ಕ್ರಮ ಜರುಗಿಸುವುದರ ಜತೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಕಟ್ಟಡ ನಿರ್ಮಾಣದ ಎಲ್ಲ ದಾಖಲೆಗಳಿದ್ದು, ಕಾನೂನುಬಾಹಿರವಾಗಿ ನಿರ್ಮಿಸಿದರೆ ಸಿಒ ದಾಖಲೆ ನೀಡಲಿ. ಭಾಲ್ಕಿ ಜೆಎಂಎಫ್ಸಿ ನ್ಯಾಯಾಲಯ ನಮ್ಮ ಪರ ತೀರ್ಪು ನೀಡಿದೆ. ಆದರೂ ಕೋಟ್೯ ಆದೇಶ ಉಲ್ಲಂಸಿ ಕಂಪೌಂಡ್ ಒಡೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭಾಲ್ಕಿಯವರು. ಅವರ ಮೇಲೆ ಸಾಕಷ್ಟು ಗೌರವವಿದ್ದು, ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ಪಾಂಡುರಂಗ ಕನಸೆ ಇದ್ದರು.