ಕಾಯಕಕ್ಕೆ ಆದ್ಯತೆ ನೀಡಿದ್ದ ಪಟ್ಟದ್ದೇವರು

KP School
Published on

ಬೀದರ್: ಬಸವಾದಿ ಶರಣರಂತೆ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಸಹ ಕಾಯಕಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಬಸವತತ್ವವನ್ನು ಕೇವಲ ಬೋಧನೆ ಮಾಡದೆ ಅದರಂತೆ ನಡೆದು ತೋರಿಸಿದ ದಾರ್ಶನಿಕರು ಎಂದು ಕೆಪಿ ವಿದ್ಯಾ ಸಂಸ್ಥೆ ಅಧ್ಯಕ್ಷರೂ ಆದ ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ಹೇಳಿದರು.

ನಗರದ ಕೆಪಿ ಸ್ಕೂಲ್ನಲ್ಲಿ ಏರ್ಪಡಿಸಿದ್ದ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು 135ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಬಸವ ತತ್ವ ಪ್ರಚಾರ-ಪ್ರಸಾರ ಜತೆಗೆ ಬಡವರು, ನಿರ್ಗತಿಕರ ಏಳಿಗೆ, ಅಸ್ಪೃಶ್ಯತೆ ನಿವಾರಣೆ, ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿ ಜಾತಿರಹಿತ ಸಮಾಜ ಕಟ್ಟುವ ಪ್ರಯತ್ನವನ್ನು ಪೂಜ್ಯರು ಮಾಡಿದ್ದರು ಎಂದು ಸ್ಮರಿಸಿದರು.

ಗಡಿ ನಾಡಿನಲ್ಲಿ ಕನ್ನಡದ ಜ್ಯೋತಿ ಬೆಳಗಿಸಿದ, ಹೊರಗಡೆ ಉರ್ದು ಬೋಡ್೯ ಹಾಕಿ ಒಳಗಡೆ ಕನ್ನಡ ಕಲಿಸಿದ್ದಲ್ಲದೆ ನಾಡು-ನುಡಿ ಸಂರಕ್ಷಣೆ ಜತೆಗೆ ಈ ಭಾಗದಲ್ಲಿ ವಚನ ಸಾಹಿತ್ಯ ಪ್ರಸಾರ ಮಾಡಿದ್ದರು. ಸರ್ಕಾರ ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಆಧುನಿಕ ಅನುಭವ ಮಂಟಪದ ಶಿಲ್ಪಿ ಪೂಜ್ಯರು ಎಂದರು.

ಸಾಹಿತಿ ಶಿವಕುಮಾರ ಕಟ್ಟೆ ಉಪನ್ಯಾಸ ನೀಡಿ, ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ತತ್ವವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉದ್ಯಮಿ ಜೈರಾಜ ಖಂಡ್ರೆ ಮಾತನಾಡಿದರು. ಪ್ರೌಢಶಾಲೆ ಮುಖ್ಯಗುರು ವಿಜಯಕುಮಾರ ಪಾಟೀಲ್ ಯರನಳ್ಳಿ ಸ್ವಾಗತಿಸಿದರು. ಮಹಾನಂದಾ ಪಾಟೀಲ್ ನಿರೂಪಣೆ ಮಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net