

ಬೀದರ್: ಜಿಲ್ಲೆಯ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ)ಯಲ್ಲಿ ನಡೆದ ಭ್ರಷ್ಟಚಾರ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಜನರ ಧ್ವನಿ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಅಂಕುಶ ಗೋಖಲೆ ಆಗ್ರಹಿಸಿದರು.
ರೈತರ ಜೀವನಾಡಿಯಾಗಿದ್ದ ಬಿಎಸ್ಎಸ್ಕೆಯನ್ನು ಆಡಳಿತ ನಡೆಸಿದವರು ಭ್ರಷ್ಟಾಚಾರ ಮಾಡಿ ಬಂದ್ ಮಾಡಿಸಿದ್ದಾರೆ. ಇದೀಗ ಕಾರ್ಖಾನೆ ಹರಾಜಿಗೆ ಹಾಕಿ ಮಾರಾಟ ಮಾಡಲಾಗಿದೆ. ಈ ಬಗ್ಗೆ ಸಮಗ್ರವಾದ ತನಿಖೆಯಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕಾರ್ಖಾನೆಯನ್ನು ಗುತ್ತಿಗೆ ಮೇಲೆ ಕೊಡಲು ಜಿಲ್ಲೆಯ ನಾಲ್ಕು ಜನ ಬಿಜೆಪಿ ಶಾಸಕರು, ಇಬ್ಬರು ಸಚಿವರ ಒತ್ತಾಯವಾಗಿದೆ. ಆದರೆ ಸಕ್ಕರೆ ಕಾರ್ಖಾನೆಯನ್ನು ಸಕರ್ಾರ ತನ್ನ ಸುಪರ್ದಿಗೆ ಪಡೆದುಕೊಂಡು ಅದನ್ನು ಸಹಕಾರ ಕ್ಷೇತ್ರದ ಮೂಲಕ ನಡೆಸಬೇಕು. ಹೀಗೆ ಮಾಡಿದರೆ ಮಾತ್ರ ರೈತರ ಹಿತಾಸಕ್ತಿ ಕಾಪಾಡಿದಂತಾಗುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರ ಸಹೋದರ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವರ ಮಗ ಉಪಾಧ್ಯಕ್ಷ, ಸಹೋದರ ನಿರ್ದೇಶಕ. ಸಾಲದ ಮರು ಪಾವತಿ ಮಾಡಿದ ಕಾರಣ ಡಿಸಿಸಿ ಬ್ಯಾಂಕ್ ನವರು ಕಾರ್ಖಾನೆಯನ್ನು ಹರಾಜು ಹಾಕಿದ್ದಾರೆ. ಇನ್ನೊಂದೆಡೆ ಹರಾಜು ರದ್ದು ಮಾಡಿ ಎಂದು ಸಚಿವರು, ಮಾಜಿ ಸಚಿವರು ಒತ್ತಾಯಿಸುತ್ತಾರೆ. ಇದೊಂದು ರೀತಿ ನಾಟಕದಂತೆ. ಇದನ್ನು ಬಿಟ್ಟು ಸರ್ಕಾರದಿಂದ ಅನುದಾನ ತಂದು ಕಾರ್ಖಾನೆ ರಕ್ಷಣೆ ಮಾಡಿ ಎಂದರು.
ಕಾರ್ಖಾನೆಗೆ ಡಿಸಿಸಿ ಬ್ಯಾಂಕ್ ಸೇರಿದಂತೆ ಅನ್ಯ ಬ್ಯಾಂಕ್‌ಗಳ ಒಟ್ಟು 406 ಕೋಟಿ ಸಾಲವಿದೆ. ಸರ್ಕಾರ ಮನಸ್ಸು ಮಾಡಿದರೆ ಸಾಲ ತೀರಿಸಿ ರೈತರ ಹಿತಕಾಪಾಡಬಹುದು. ಒಂದು ವೇಳೆ ಕಾರ್ಖಾನೆಯನ್ನು ಹರಾಜು ಅಥವಾ ಗುತ್ತಿಗೆ ನೀಡಿದರೆ ನ್ಯಾಯಾಲಯಕ್ಕೆ ಹೋಗಲಾಗುವುದು ಎಂದು ಹೇಳಿದರು.
ಪ್ರಮುಖರಾದ ಶಿವರಾಜ ಚೀನಕೆರಾ, ಮಹ್ಮದ್ ಜಮೀರಖಾನ್, ತಿಪ್ಪಣ್ಣ ವಾಲಿ, ಮಾರುತಿ ಕಾಂಬ್ಳೆ, ರವಿ ಕೋಟೆ, ದತ್ತು ನಾಗವಂಶಿ, ಲಕ್ಷ್ಮಣ ಹೋಚಕನಳ್ಳಿ ಇತರರಿದ್ದರು.