ಕಳಪೆ ಔಷಧ ಕೊಟ್ಟವರಿಗೆ ಕಪ್ಪುಪಟ್ಟಿಗೆ ಸೇರಿಸಿ

mla beldale
Published on
ಬೀದರ್: ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಬಾಣಂತಿಯರ ಹಾಗೂ ನವಜಾತ ಶಿಶುಗಳ ಸಾವಿನ ಪ್ರಮಾಣ ಗಣನೀಯ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಿ ಅಮಾಯಕರ ಜೀವ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಒತ್ತಾಯಿಸಿದ್ದಾರೆ.
ಬೆಳಗಾವಿ ಅಧಿವೇಶನದ ಕೊನೆಯ ದಿನವಾದ ಗುರುವಾರ ಈ ವಿಷಯ ಪ್ತಸ್ತಾಪಿಸಿ, ಕಳೆದ ಎರಡು ವರ್ಷಗಳಲ್ಲಿ ಬೀದರ್, ಕಲಬುರಗಿ, ಯಾದಗಿರಿ, ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಸುಮಾರು 300 ಬಾಣಂತಿಯರು, 4 ಸಾವಿರ ನವಜಾತ ಶಿಶುಗಳು ಸಾವನ್ನಪ್ಪಿದ ಮಾಹಿತಿ ಇದೆ. ಈ ಅಂಕಿ-ಅಂಶ ನಿಜಕ್ಕೂ ಭಯಪಡಿಸುತ್ತಿದೆ. ಹೀಗಾಗಿ ಇನ್ನಾದರೂ ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಗಮನ ಸೆಳೆದರು.
ಬಾಣಂತಿಯರ ಸಾವಿಗೆ ಕಳಪೆ ಔಷಧ( ಡ್ರಗ್ಸ್) ಬಳಕೆ ಕಾರಣ ಎಂಬ ವರದಿ ಬರುತ್ತಿವೆ. ಆರೋಗ್ಯ ಸಚಿವರು ಸಹ ಕ್ವಾಲಿಟಿ ಇಲ್ಲದ ಔಷಧಗಳು ಬರುತ್ತಿವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ  ರಾಜ್ಯ ಡ್ರಗ್ ಕಂಟ್ರೋಲರ್, ಹಿರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಔಷಧದ ಗುಣಮಟ್ಟ ನೋಡದೆ ಜನರಿಗೆ ತಲುಪಿಸಿದರೆ ಅಮಾಯಕರು ಬಲಿಯಾಗುವುದಿಲ್ಲವೆ? ಇದಕ್ಕೆ ಯಾರು ಹೊಣೆ? ಕೂಡಲೇ ಕಳಪೆ ಔಷಧ ಸರಬರಾಜು ಮಾಡಿದ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಪ್ರಕರಣ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನಿರ್ಲಕ್ಷ್ಯಕ್ಕೆ ಬಲಿಯಾದ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಈ ಪ್ರಕರಣ ಸಂಬಂಧ ಈಗಾಗಲೇ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಕಳಪೆ ಡ್ರಗ್ಸ್ ಸರಬರಾಜು ಮಾಡಿದ ಕಂಪನಿ ವಿರುದ್ಧವೂ ಕ್ರಮ ಜರುಗಲಿದೆ. ಬಾಣಂತಿಯರ, ನವಜಾತ ಶಿಶುಗಳ ಆರೋಗ್ಯ ರಕ್ಷಣೆಗೆ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಕಾಳಜಿ, ಮುನ್ನೆಚ್ಚರಿಕೆ ವಹಿಸಲು  ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net