

ಬೀದರ್: ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಡಿಸೆಂಬರ್ 21 ರಿಂದ 28 ರ ವರೆಗೆ ಅಖಂಡ ಹರಿನಾಮ ಸಪ್ತಾಹ, ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಹಾಗೂ ಭಾಗವತ ಕಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮರಾಠ ಸಮಾಜದ ಮುಖಂಡ ದೀಪಕ್ ಪಾಟೀಲ ಚಾಂದೋರಿ ತಿಳಿಸಿದ್ದಾರೆ.
ಗ್ರಾಮದ ಪಾಂಡುರಂಗ ಹಾಗೂ ಮಹಾದೇವ ಮಂದಿರದ ಆವರಣದಲ್ಲಿ ನಿತ್ಯ ನಸುಕಿನ ಜಾವ 4 ರಿಂದ 5 ರ ವರೆಗೆ ಕಾಕಡ, ಬೆಳಿಗ್ಗೆ 7 ರಿಂದ 10 ರ ವರೆಗೆ ಜ್ಞಾನೇಶ್ವರಿ ಪಾರಾಯಣ, ಮಧ್ಯಾಹ್ನ 12 ರಿಂದ 2 ರ ವರೆಗೆ ಗಾಥಾ ಭಜನೆ, ಮಧ್ಯಾಹ್ನ 3 ರಿಂದ 5.30 ರ ವರೆಗೆ ಭಾಗವತ ಕಥಾ, ಸಂಜೆ 6 ರಿಂದ 7 ರ ವರೆಗೆ ಹರಿಪಾಠ, ರಾತ್ರಿ 9 ರಿಂದ 11 ರ ವರೆಗೆ ಹರಿ ಕೀರ್ತನೆ ಹಾಗೂ ರಾತ್ರಿ 12 ರಿಂದ ನಸುಕಿನ ಜಾವ 4 ರ ವರೆಗೆ ಹರಿ ಜಾಗರಣೆ ನಡೆಯಲಿದೆ ಎಂದು ಹೇಳಿದ್ದಾರೆ.
ಲಾತೂರಿನ ಹರಿ ಭಕ್ತ ಪಾರಾಯಣಕಾರರಾದ ಛಾಯಾತಾಯಿ ಕದ್ಮಾಪುರೆ ಲಾತೂರಕರ್ ಭಾಗವಥ ಕಥಾ ನಡೆಸಿಕೊಡಲಿದ್ದಾರೆ. ಪರಮೇಶ್ವರ ಮಹಾರಾಜ ಶಹಾಪುರಕರ್, ಶರಣಪ್ಪ ಮಹಾರಾಜ ಬೆಲ್ದಾಳ್, ಮೋಹನ್ ಮಹಾರಾಜ ಖುರ್ದಳ್ಳಿಕರ್, ಕಾಂಚನಾತಾಯಿ ಶೆಳಕೆ, ಧೋಂಡಿಹಿಪ್ಪರ್ಗಾದ ಗೋರಕಗಿರಿ ಮಹಾರಾಜ, ತೆಲಗಾಂವ್‍ನ ಸಂದೀಪ್ ಮಹಾರಾಜ, ವಿಲಾಸ್ ಮಹಾರಾಜ ಗಜಗೆ ಕೀರ್ತನೆ ಹಾಗೂ ಏಕನಾಥ ಮಹಾರಾಜ ಹಂಡೆ ಪಂಢಪುರಕರ್ ಮಹಾ ಪ್ರಸಾದ ಕೀರ್ತನೆ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಲಾಗಿದೆ. ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ರತಿ ದಿನ ದಾಸೋಹಿಗಳಿಂದ ಭಕ್ತರಿಗೆ ಉಪಾಹಾರ, ಪ್ರಸಾದ ವ್ಯವಸ್ಥೆ ಇರಲಿದೆ. ಕೊನೆಯ ದಿನ ಗ್ರಾಮಸ್ಥರ ವತಿಯಿಂದ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮವು ಜನರ ಆಧ್ಯಾತ್ಮಿಕ ಹಸಿವು ತಣಿಸಲಿದೆ. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.