ನುಡಿದಂತೆ ನಡೆಯದ ರಾಜ್ಯ ಕಾಂಗ್ರೆಸ್ ಸರ್ಕಾರ

beldale
Published on

ಬೀದರ್: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಪ್ರಗತಿ ವಿಷಯದಲ್ಲಿ ಈ ಮಾತು ಸುಳ್ಳಾಗಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಮಾತೆತ್ತಿದರೆ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎನ್ನಲಾಗುತ್ತಿದೆ. ಆದರೆ ನಮ್ಮ ಭಾಗದ ಪಾಲಿಗೆ ಇದು ಶುದ್ಧ ಸುಳ್ಳು. ಅಭಿವೃದ್ಧಿ ಕೆಲಸಕ್ಕೆ ಅನುದಾನ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

ಕೆಕೆಆರ್.ಡಿಬಿ ಬಿಟ್ಟರೆ ನಮ್ಮ ಪಾಲಿಗೆ ಸರ್ಕಾದ ಅನುದಾನ ಶೂನ್ಯ. ಬಹುತೇಕ ಯೋಜನೆಗಳು ಸೊರಗುತ್ತಿವೆ. ಹೊಸ ಕೆಲಸಗಳು ಅಕ್ಷರಶಃ ಸ್ಥಗಿತಗೊಂಡಿವೆ. ಕಲಬುರಗಿಯಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಘೋಷಿಸಲಾಗಿತ್ತು. ಆದರೆ ಸಂಪುಟ ಸಭೆಯ ಯಾವ ನಿರ್ಣಯವೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಕಿಡಿಕಾರಿದರು.

ಪ್ರಗತಿಗೆ ವೇಗ ನೀಡಲು ತಕ್ಷಣವೇ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಬ್ಯಾಕ್ಲಾಗ್ ಹುದ್ದೆ ಭರ್ತಿ ಮಾಡಬೇಕು. ಗುತ್ತಿಗೆ ಆಧಾರದ ಬೋಧಕರ ವೇತನ 30 ಸಾವಿರ ರೂ. ಹಾಗೂ ಡಿ, ಸಿ ಗ್ರೂಪ್ ನೌಕರರ ವೇತನ ಕನಿಷ್ಠ 25 ಸಾವಿರ ರೂ.ಗೆ ಹೆಚ್ಚಿಸಲು ಆಗ್ರಹಿಸಿದರು.

ಕಕದಲ್ಲಿ ದೊಡ್ಡ ಕೈಗಾರಿಕೆಗಳಿಲ್ಲದೆ ದುಡಿಯುವ ಕೈಗಳಿಗೆ ಕೆಲಸ ಇಲ್ಲವಾಗಿದೆ. ಅಂತಲೇ ಲಕ್ಷಾಂತರ ಜನರು, ಕಾರ್ಮಿಕರು ಹೊಟ್ಟೆ ತುಂಬಿಸಿಕೊಳ್ಳಲು ಪ್ರತಿವರ್ಷ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಸರ್ಕಾರ ನಮ್ಮಲ್ಲೇ ದೊಡ್ಡ ಕೈಗಾರಿಕೆ ಸ್ಥಾಪಿಸಿ ನಿರುದ್ಯೋಗಿಗಳಿಗೆ ಕೆಲಸ ಕೊಡಬೇಕು ಎಂದು ಒತ್ತಾಯಿಸಿದರು.

ಹತ್ತು ನಿಮಿಷಕ್ಕೂ ಅಕ ಡಾ.ಬೆಲ್ದಾಳೆ ಅವರು ಈ ಭಾಗದ ಅನೇಕ ಸಮಸ್ಯೆಗಳನ್ನು ಪ್ರಸ್ತಾಪಿಸಿ ಸದನದ ಗಮನ ಸೆಳೆದರು. ಕಾರಂಜಾ ಸಂತ್ರಸ್ತರ ಹೋರಾಟ, ಸಾಮೂಹಿಕ ಆತ್ಮಹತ್ಯೆ ಯತ್ನ, ವೈಜ್ಞಾನಿಕ ಪರಿಹಾರ, ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ವಿಷಯಗಳನ್ನೂ ಉಲ್ಲೇಖಿಸಿದರು. ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಕಾರಂಜಾ ಸಂತ್ರಸ್ತರ ಬೇಡಿಕೆಗೆ ಸ್ಪಂದಿಸಬೇಕು ಎಂದು ಕೋರಿದರು.

ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಹಿಂದೆ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿ 200 ಕೋಟಿ ರೂ. ಒದಗಿಸಿದ್ದರು. ಆದರೆ ಈ ರ್ಸಾರ ಬಂದ ಬಳಿಕ ಸೂಕ್ತ ಅನುದಾನ ನೀಡುತ್ತಿಲ್ಲ. ಬಿಕೆಡಿಬಿಗೆ ಸಿಎಂ ಅಧ್ಯಕ್ಷರಾಗಿದ್ದು, ಬಸವಕಲ್ಯಾಣದಲ್ಲಿ ಸಭೆ ನಡೆಸಿ ಅನುಭವ ಮಂಟಪ ಸೇರಿ ಎಲ್ಲ ಕೆಲಸಗಳನ್ನು ಕಾಲಮಿತಿಯಲ್ಲಿ ಮುಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಾಂಜ್ರಾ ನೀರಿನ ಸದುಪಯೋಗವಾಗಲಿ

ಗೋದಾವರಿ ಜಲಾನಯನ ಪ್ರದೇಶ ವ್ಯಾಪ್ತಿಯ ಬೀದರ್ ಜಿಲ್ಲೆಯಲ್ಲಿ ಹರಿಯುವ ಮಾಂಜ್ರಾ ನದಿ ನೀರಿನ ಸಂಪೂರ್ಣ ಬಳಕೆಗೆ ಸರ್ಕಾರ ಯೋಜನೆ ರೂಪಿಸಬೇಕೆಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದರು. ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಗೋದಾವರಿ ಜಲಾನಯನದಡಿ ಜಿಲ್ಲೆಗೆ 22 ಟಿಎಂಸಿ ನೀರು ಹಂಚಿಕೆಯಾಗಿದೆ. ಇದರಲ್ಲಿ ನಾವು ಸುಮಾರು 16 ಟಿಎಂಸಿ ಬಳಸುತ್ತಿದ್ದು, ಉಳಿದ ನೀರು ತೆಲಂಗಾಣಕ್ಕೆ ಹೋಗುತ್ತಿದೆ. ನಮ್ಮ ಪಾಲಿನ ನೀರಿನ ಸಂಪೂರ್ಣ ಬಳಸಲು ಗೋದಾವರಿ ಜಲಾನಯನ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಪ್ರಾದೇಶಿಕ ಅಸಮತೋಲನ ನಿವಾರಣೆ ಸಂಬಂಧ ಹೊಸ ಅಭಿವೃದ್ಧಿ ಸೂಚ್ಯಂಕ ಸಿದ್ಧಪಡಿಸಲು ರಚಿಸಿದ ಡಾ.ಗೋವಿಂದರಾಜು ಸಮಿತಿ ವರದಿ ಬೇಗ ತರಿಸಿಕೊಂಡು ವಿಧಾನಸಭೆ ಕ್ಷೇತ್ರವಾರು ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯ, ಅಭಿವೃದ್ಧಿ ಕೆಲಸಗಳಲ್ಲಿನ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net