

ಔರಾದ್: ಬಲ್ಲೂರ(ಜೆ) ಗ್ರಾಮದಲ್ಲಿ ಸಿಪೆಟ್ ಕೇಂದ್ರ ಆರಂಭಿಸಲು ಒಡಂಬಡಿಕೆ ಅಂತಿಮ ಹಂತದಲ್ಲಿದ್ದು, ಶೀಘ್ರ ಆರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಶಾಸಕ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಬೆಳಗಾವಿ ಅಧಿವೇಶದಲ್ಲಿ ವಿಷಯ ಪ್ರಸ್ತಾಪಿಸಿದ ಚವ್ಹಾಣ್, ಹಿಂದುಳಿದ ತಾಲೂಕಿನಲ್ಲಿ ಈ ಯೋಜನೆ ಶೀಘ್ರ ಅನುಷ್ಠಾನಗೊಳಿಸಲಾಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ, ಸರ್ಕಾರ ಸಿಪೆಟ್ ಸಂಸ್ಥೆಯೊಂದಿಗೆ ಒಡಂಬಡಿಕೆಗೆ ಮುಂದಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಉದ್ದೇಶಿತ ಕೆಲಸ ಕಾರ್ಯಗತಗೊಳಿಸಲು ಸಿಪೆಟ್ ಗೆ ಕೋರಲಾಗುವುದು ಎಂದು ಹೇಳಿದರು.
ಔರಾದ್ ಕ್ಷೇತ್ರದ ಯುವಜನತೆಗೆ ಕೌಶಲ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ 90 ಕೋಟಿ ಅನುದಾನದ ಸಿಪೆಟ್ ಕೇಂದ್ರ ಮಂಜೂರು ಮಾಡಿಸಿರುವೆ. ಬಲ್ಲೂರ(ಜೆ)ದಲ್ಲಿ 10 ಎಕರೆ ಜಮೀನು ಒದಗಿಸಿದ್ದು, 2022ರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೂಮಿಪೂಜೆ ನೆರವೇರಿಸಿದ್ದಾರೆ. ಆದರೆ ಕೆಲವರ ಇಚ್ಛಾಶಕ್ತಿ ಕೊರತೆಯಿಂದ ವಿಳಂಬವಾಗಿದೆ ಎಂದು ಚವ್ಹಾಣ್ ಸದನದ ಗಮನಕ್ಕೆ ತಂದರು.
ಸಂಬಂತ ಸಚಿವರನ್ನು ಪದೇಪದೆ ಭೇಟಿ ಮಾಡಿ ಕೆಲಸ ಬೇಗ ಆರಂಭಿಸಬೇಕೆಂದು ಮನವಿ ಮಾಡಿದ್ದಲ್ಲದೆ ಸರ್ಕಾರಕ್ಕೆ ಸಾಕಷ್ಟು ಸಲ ಪತ್ರ ಸಹ ಬರೆದಿರುವೆ. ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಈ ಯೋಜನೆ ವಿಳಂಬವಾಗಲು ಬಿಡುವುದಿಲ್ಲ. ಆದಷ್ಟು ಶೀಘ್ರ ಸಿಪೆಟ್ ಕಾಮಗಾರಿ ಆರಂಭಿಸುವಂತೆ ನೋಡಿಕೊಳ್ಳುವುದಾಗಿ ಹೇಳಿದರು.