

ಬೀದರ್: ಜಿಲ್ಲೆಯಲ್ಲಿ ನಿರಂತರ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ತಡೆಯದೆ ನಿರ್ಲಕ್ಷ್ಯ ವಹಿಸಿದ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕಪಿಲ್ ಗೋಡಬೋಲೆ ಆಗ್ರಹಿಸಿದ್ದಾರೆ.
ಖಂಡ್ರೆ ಸಚಿವರಾಗಿದ್ದ ದಿನದಿಂದ ಜಿಲ್ಲಾದ್ಯಂತ ಕೋಮುಗಲಭೆ, ದೌರ್ಜನ್ಯ ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಚಿವರ ಕೈಗೊಂಬೆಯಂತೆ ಜಿಲ್ಲಾಡಳಿತ ಕೆಲಸ ಮಾಡುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಡಾ.ಅಂಬೇಡ್ಕರ್ ಭಾವಚಿತ್ರವನ್ನು ಸಾಮಾಜಿಕ ತಾಲತಾಣದಲ್ಲಿ ಅವಮಾನಿಸಿದ್ದು, ಭಾಲ್ಕಿ ತಾಲೂಕಿನ ಮಳಚಾಪುರದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ತಡೆ, ಚಳಕಾಪುರದಲ್ಲಿ ದಲಿತರ ಬಡಾವಣೆಗೆ ನುಗ್ಗಿ ಹಲ್ಲೆ, ಹುಮನಾಬಾದ್ ತಾಲೂಕಿನ ಹುಣಸಗೇರಾ ಬಾಲಕನ ಮೇಲೆ ಹಲ್ಲೆ, ಔರಾದ್ ತಾಲೂಕಿನ ಕೌಡಗಾಂವದಲ್ಲಿ ಬಾಬಾಸಾಹೇಬ್ ಮೂತರ್ಿ ಪಕ್ಕದಲ್ಲಿ ಇನ್ನೊಬ್ಬ ಮಹಾತ್ಮರ ಭಾವಚಿತ್ರ ಇಟ್ಟು ಎರಡು ಜಾತಿ ನಡುವೆ ಸಂಘರ್ಷ ನಡೆದಿದೆ. ಕೃತ್ಯ ಎಸಗಿದವರನ್ನು ಬಂಧಿಸದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ದೂರಿದರು.
ವಿಳಾಸಪುರದಲ್ಲಿ ಇತ್ತೀಚೆಗೆ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಕಾರಂಜಾ ಸಂತ್ರಸ್ತರು ಎರಡೂವರೆ ವರ್ಷದಿಂದ ಹೋರಾಟ ಮಾಡುತ್ತಿದ್ದು, ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಜ್ಞಾನೇಶ್ವರ ಸಿಂಗಾರೆ, ಅಶೋಕ ಮಂಠಾಳಕರ್, ಪ್ರಮುಖರಾದ ಶಕ್ತಿಕಾಂತ ಬಾವಿದೊಡ್ಡಿ, ಸತೀಶ್ ದೊಡ್ಡಿ, ಪ್ರದೀಪ ಫುಲೆ, ಮಹೇಶ ಪೋಲಾ, ಶಂಕರ ಪುಲೆ, ರಜನಿಕಾಂತ ನಾಯಕ್ ಇದ್ದರು.