

ಬೀದರ್: ಸರ್ಕಾರ ತಕ್ಷಣ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಪೌರಾಡಳಿತ ಸಚಿವ ರಹೀಮ್ ಖಾನ್ ಹಾಗೂ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರ ನಗರದಲ್ಲಿನ ಮನೆ ಎದುರು ತಮಟೆ ಚಳವಳಿ ಮಾಡಿದ ಪ್ರಮುಖರು, ಮಾದಿಗರ ಮೂರು ದಶಕದ ಬೇಡಿಕೆಯಾಗಿದ್ದ ಒಳಮೀಸಲಾತಿ ಜಾರಿ ಮಾಡುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈಗಾಗಲೇ ಹರಿಯಾಣ ಹಾಗೂ ಪಂಜಾಬ್ ಸರ್ಕಾರಗಳು ಜಾರಿ ಮಾಡಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಕಿಡಿಕಾರಿದರು.
ಎಲ್ಲಕ್ಕಿಂತ ಮೊದಲು ರಾಜ್ಯದಲ್ಲಿ ಒಳಮೀಸಲು ಜಾರಿಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಪರಿಶಿಷ್ಟ 101 ಜಾತಿಗಳಲ್ಲಿ ಬಹುಸಂಖ್ಯಾತ ಮಾದಿಗ ಸಮಾಜವನ್ನು ಅವಮಾನಿಸಿದೆ ಎಂದು ಆರೋಪಿಸಿದರು.
ಈಗಾಗಲೇ ಮಾಧುಸ್ವಾಮಿ ವರದಿ ನೀಡಿದ್ದರೂ ನಾಗಮೋಹನ್ ದಾಸ್ ಸಮಿತಿ ರಚಿಸಿ ಮತ್ತೆ ವಿಳಂಬ ನೀತಿ ಅನುಸರಿಸುವ ಹುನ್ನಾರ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದನ್ನು ಖಂಡಿಸಿ ಸೋಮವಾರ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡುತ್ತಿದ್ದು, ಸಮುದಾಯದ ಒಂದು ಲಕ್ಷ ಜನ ಸೇರಲಿದ್ದಾರೆ ಎಂದು ತಿಳಿಸಿದರು.
ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ, ಜಿಲ್ಲಾಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ, ಉಪಾಧ್ಯಕ್ಷ ಕಮಲಾಕರ ಹೆಗಡೆ, ಕಾರ್ಯಾಧ್ಯಕ್ಷ ಪೀಟರ್ ಚಿಟಗುಪ್ಪ, ರಾಹುಲ್, ಜೈಶೀಲ್, ಹರೀಶ್, ರಾಜಕುಮಾರ ಪಿಳ್ಳೆಕರ್, ಶಿವಣ್ಣ ಹಿಪ್ಪಳಗಾಂವ, ವೀರಶೆಟ್ಟಿ, ಸಂಜು ರಾಮದಾಸ, ಲಾಲಪ್ಪ ನಿರ್ಣಾ ಇತರರಿದ್ದರು. ಸಚಿವ-ಶಾಸಕರಿಗೆ ಮನವಿಪತ್ರ ಸಲ್ಲಿಸಲಾಯಿತು.