

ಬೀದರ್: ಮಹಾರಾಷ್ಟ್ರದ ಪರಭಣಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಮುಂಭಾಗದಲ್ಲಿದ್ದ ಸಂವಿಧಾನದ ಪ್ರತಿಮೆ ಹಾಗೂ ತಾಲೂಕಿನ ವಿಳಾಸಪುರದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವುದನ್ನು ವಿರೋಧಿಸಿ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾ ಘಟಕದಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಡಾ.ಅಂಬೇಡ್ಕರ್ ಅವರನ್ನು ಗುರಿಯಾಗಿಸಿಕೊಂಡು ಅಪಮಾನ ಮಾಡುವ ಬೆಳವಣಿಗೆ ಹೆಚ್ಚೆಚ್ಚು ನಡೆಯುತ್ತಿವೆ. ಅಂಥ ಕೃತ್ಯ ಮಾಡಿದವರನ್ನು ಬಂಧಿಸಿ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸಬೇಕು. ಪರಭಣಿಯಲ್ಲಿ ನಡೆದ ಘಟನೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಳಾಸಪುರದಲ್ಲಿ ಈಚೆಗೆ ನೀಲಿ ಧ್ವಜ ಕಿತ್ತು ಹಾಕಲಾಗಿತ್ತು. ಇದೀಗ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ರಾಷ್ಟ್ರಪತಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.
ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ್, ಸಂಚಾಲಕರಾದ ಅಬ್ದುಲ್ ಮನ್ನಾನ್ ಸೇಠ್, ಬಸವರಾಜ ಮಾಳಗೆ, ಪ್ರಮುಖರಾದ ರಮೇಶ ಡಾಕುಳಗಿ, ಬಾಬುರಾವ ಪಾಸ್ವಾನ್, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ಅಂಬದಾಸ ಗಾಯಕವಾಡ, ಶಾಲಿವಾನ್ ಬಡಿಗೇರ್, ರಾಜಕುಮಾರ ಬನ್ನೇರ್, ಸಚಿನ್ ಬಂದಗೆ, ರಾಜಕುಮಾರ ಬನ್ನೇರ್, ಸಂದೀಪ್ ಕಾಂಟೆ, ಪ್ರದೀಪ್ ನಾಟೇಕರ್, ಸಾಯಿ ಸಿಂಧೆ, ವಿನೋದ ಸಿಂಧೆ, ದಿಲೀಪಕುಮಾರ ಭೋಸ್ಲೆ, ಕಾಶಿನಾಥ ಚೆಲುವಾ, ವಿಠ್ಠಲದಾಸ ಪ್ಯಾಗೆ, ದಶರಥ ಗುರು, ಶ್ರೀನಿವಾಸ ದಯಾನ್, ಮಲ್ಲಿಕಾರ್ಜುನ ಮೊಳಕೆರೆ, ಜಗನ್ನಾಥ ಸಾಗರ್ ಇತರರಿದ್ದರು.