

ಬೀದರ್: ಕೊಳೆಗೇರಿಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸ್ಲಂ ಬೋಡ್೯ ಹಾಗೂ ಸಂಬಂಧಿತ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರ್.ಪಿಐ (ಅಂಬೇಡ್ಕರ್) ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್ ಆಗ್ರಹಿಸಿದರು.
ನಗರದ ಮೈಲೂರು, ಹಾರೂರಗೇರಿ, ಅಂಬೇಡ್ಕರ್ ಕಾಲನಿ, ಚಿದ್ರಿ, ಶಹಾಪುರ ಗೇಟ್ ಹಾಗೂ ಅಬ್ದುಲ್ ಫೈಜ್ ದರ್ಗಾ ಪ್ರದೇಶದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ ಮನೆ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.
ಪ್ರತಿ ಮನೆಗೆ ಮಂಡಳಿ ಏಳು ಲಕ್ಷ ರೂ. ಅಂದಾಜು ಮಾಡಿದೆ. ಅದರಲ್ಲಿ ಕೇಂದ್ರ 1.50 ಲಕ್ಷ ಹಾಗೂ ರಾಜ್ಯ ಸರ್ಕಾರ ಎರಡು ಲಕ್ಷ ರೂ. ಸೇರಿ 3.50 ಲಕ್ಷ ರೂ. ಮಂಡಳಿ ನೀಡಿದರೆ, ಫಲಾನುಭವಿಗಳು ಬ್ಯಾಂಕ್ ಸಾಲ 2,60,612 ರೂ. ಕಟ್ಟಬೇಕೆಂದು ಮಂಜೂರಾತಿ ಪತ್ರದಲ್ಲಿ ತಿಳಿಸಲಾಗಿದೆ. ಇಷ್ಟಾದರೂ ಬಹುತೇಕ ಮನೆಗಳಿಗೆ ಕಲ್ಲು, ಸಿಮೆಂಟ್, ಕಾಂಕ್ರೀಟ್, ಉಸುಕು ಸೇರಿ ಕಳಪೆ ವಸ್ತುಗಳನ್ನು ಬಳಸಲಾಗಿದೆ ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ನಡೆದಿರುವ ಚಳಿಗಾಲದ ಅಧಿವೇಶನಕ್ಕೆ ಜಿಲ್ಲೆಯಿಂದ ಸುಮಾರು 500 ಫಲಾನುಭವಿಗಳು ತೆರಳಿ ಮುಖ್ಯಮಂತ್ರಿ, ವಸತಿ ಸಚಿವರು ಸೇರಿ ಸಂಬಂಧಿತ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗುವುದು ಎಂದರು.
ದಲಿತ ಯೂನಿಟಿ ಮೂಮೆಂಟ್ ರಾಜ್ಯಾಧ್ಯಕ್ಷ ಪ್ರಕಾಶ ರಾವಣ, ದಲಿತ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಪ್ರಮುಖರಾದ ಸಂಜುಕುಮಾರ ಮೇತ್ರೆ, ಸಂತೋಷ ಎಣಕೂರೆ, ವರುಣ್ ಮೈಲೂರಕರ್, ಪವನ್ ಕುದುರೆ ಇತರರಿದ್ದರು.