ಒಳಮೀಸಲು ಜಾರಿಗಾಗಿ ಸುವರ್ಣಸೌಧಕ್ಕೆ ಮುತ್ತಿಗೆ 16ಕ್ಕೆ

Farnadish hippalgon
Published on

ಬೀದರ್: ಒಳಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಡಿ.14ರಂದು ಜಿಲ್ಲೆಯ ಎಲ್ಲ ಶಾಸಕರ ಮನೆ ಎದುರು ತಮಟೆ ಚಳವಳಿ ಹಾಗೂ 16ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ ಹೇಳಿದರು.

ಮಾದಿಗರ ಮೂರು ದಶಕದ ಬೇಡಿಕೆ ಒಳಮೀಸಲಾತಿ ಜಾರಿ ಮಾಡುವಂತೆ ಆ.1ರಂದು ಸುಪ್ರೀಂಕೋಟ್೯ ತೀರ್ಪು ನೀಡಿದೆ. ಈಗಾಗಲೇ ಹರಿಯಾಣ ಹಾಗೂ ಪಂಜಾಬ್ ಸರ್ಕಾರಗಳು ಜಾರಿಗೊಳಿಸಿವೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ನಾಡಿನ 46 ಲಕ್ಷ ಜನಸಂಖ್ಯೆಯ ಮಾದಿಗರ ಮತಗಳನ್ನು ಪಡೆದು ಅಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಲ್ಲಕ್ಕಿಂತ ಮೊದಲು ರಾಜ್ಯದಲ್ಲಿ ಒಳಮೀಸಲು ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ಬಹುಸಂಖ್ಯಾತ ಮಾದಿಗರನ್ನು ಅವಮಾನಿಸಿದೆ ಎಂದು ಕಿಡಿಕಾರಿದರು.

ಈಗಾಗಲೇ ಮಾಧುಸ್ವಾಮಿ ವರದಿ ನೀಡಿದ್ದರೂ ನಾಗಮೋಹನ್ ದಾಸ್ ಸಮಿತಿ ರಚಿಸಿ ಮತ್ತೆ ವಿಳಂಬ ನೀತಿ ಅನುಸರಿಸುವ ಹುನ್ನಾರ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಈ ದ್ವಂದ್ವ ನಿಲುವು ಖಂಡಿಸಿ ಸಚಿವ-ಶಾಸಕರ ಮನೆ ಎದುರು ತಮಟೆ ಚಳವಳಿ ನಡೆಸಿದ ಬಳಿಕ ಒಂದು ಲಕ್ಷ ಜನರಿಂದ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಜಿಲ್ಲೆಯಿಂದ 1000ಕ್ಕೂ ಅಧಿಕ ಮಾದಿಗರು ಬೆಳಗಾವಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ ಮಾತನಾಡಿದರು. ಉಪಾಧ್ಯಕ್ಷ ಕಮಲಾಕರ ಹೆಗಡೆ, ಕಾರ್ಯಾಧ್ಯಕ್ಷ ಪೀಟರ್ ಚಿಟಗುಪ್ಪ, ರಾಜಕುಮಾರ ಟಿಳ್ಳೆಕರ್, ಸ್ವಾಮಿದಾಸ ಮೇಘಾ, ವೀರಶೆಟ್ಟಿ ಬಂಬುಳಗಿ, ವಿಜಯಕುಮಾರ ಸೂರ್ಯವಂಶಿ, ರವೀಂದ್ರ ಸೂರ್ಯವಂಶಿ, ಗೋವಿಂದ ಭೋಸ್ಲೆ, ಅನಿಲಕುಮಾರ, ಮನೋಹರ ಉಡಬಾಳ, ಪ್ರವೀಣ ನೌಬಾದೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net