

ಕಮಲನಗರ: ಕಾರ್ಯಕರ್ತರು ಪಕ್ಷದ ನಿಜವಾದ ಆಸ್ತಿ. ಕ್ಷೇತ್ರದಲ್ಲಿ ಬಿಜೆಪಿಯ ಸತತ ಗೆಲುವಿಗೆ ಕ್ರಿಯಾಶೀಲ ಕಾರ್ಯಕರ್ತರೇ ಕಾರಣ. ಸಂಘಟನಾ ಪರ್ವ ಯಶಸ್ಸಿಗೆ ಪಕ್ಷದ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಕೆಲಸ ಮಾಡಬೇಕು. ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಬಿಜೆಪಿ ತಾಲೂಕಾಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಹೇಳಿದರು.
ತಾಲೂಕಿನ ಠಾಣಾಕುಶನೂರ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಬಳತ್(ಕೆ) ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಘಟನಾ ಪರ್ವ ಅಭಿಯಾನದಲ್ಲಿ ಮಾತನಾಡಿದ ಅವರು, ಮಹಿಳೆಯರು ಹಾಗೂ ಯುವಕರು ಬಿಜೆಪಿ ಸದಸ್ಯರಾಗಿ ನೋಂದಣಿಯಾಗುವ ಮೂಲಕ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಯನ್ನು ಬಲಪಡಿಸಬೇಕು. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ33ರಷ್ಟು ಅವಕಾಶವನ್ನು ಕಲ್ಪಿಸುತ್ತಿರುವ ಆಶಯಕ್ಕೆ ಪೂರಕವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯರಾಗಿ ಮುಖ್ಯವಾಹಿನಿಯಲ್ಲಿ ಕ್ರಿಯಾಶೀಲವಾಗಿ ಗುರುತಿಸಿಕೊಳ್ಳಬೇಕು ಎಂದರು.
ಬಿಜೆಪಿ ಮುಖಂಡ ಬಾಲಾಜಿ ವಾಘಮಾರೆ ಮಾತನಾಡಿ, ಸಂಘಟನೆಯ ವಿವಿಧ ಹಂತಗಳನ್ನು ಬೂತ್ ಮಟ್ಟದಿಂದಲೇ ಪಕ್ಷದ ಸಂವಿಧಾನ ಮತ್ತು ಆಶಯದಂತೆ ಗಟ್ಟಿಗೊಳಿಸುವಲ್ಲಿ ಪ್ರಮುಖರು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಉದಯ ಸೊಲ್ಲಾಪುರೆ, ಯೋಗೇಶ ಬಿರಾದಾರ್, ತಾನಾಜಿ ಬಿರಾದಾರ್, ಮಾರುತಿ ನಂದಗಾವೆ, ಅಂಕುಶ ಬಿರಾದಾರ್, ಅರ್ಜುನ ಬೀರಗೆ, ಮೋಜಿನಸಾಬ್, ವೆಂಕಟ ರಾಮಚಂದ್ರ, ಪರಮೇಶ ಬಿರಾದಾರ್, ರಾಮಶೆಟ್ಟಿ ಬಿರಾದಾರ್, ಕಲ್ಲಪ್ಪ ಹೂಗಾರ ಇತರರಿದ್ದರು.
ಠಾಣಾಕುಶನೂರ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಬಳತ್(ಕೆ) ಗ್ರಾಮದ ಬೂತ್ ಸಂಖ್ಯೆ 198ರ ನೂತನ ಅಧ್ಯಕ್ಷರಾಗಿ ಶಿವರಾಜ ಶೇಳಕೆ, ಕಾರ್ಯದರ್ಶಿಯಾಗಿ ಲಕ್ಷ್ಮೀಕಾಂತ ಬಿರಾದಾರ್ ಮತ್ತು ಬಿಎಲ್ಒ-2 ಆಗಿ ಸಂಜಕುಮಾರ ಬನಸೋಡೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬೂತ್ ಅಧ್ಯಕ್ಷರ ನೇಮಕದ ನಂತರ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.