ಪಟ್ಟದ್ದೇವರು ಜಯಂತಿ ಅದ್ದೂರಿಗೆ ಕೈಜೋಡಿಸಿ

Oplus_131072
Oplus_131072
Published on

ಭಾಲ್ಕಿ: ಪಟ್ಟಣದಲ್ಲಿ ಡಿ.22ರಂದು ಶತಾಯಷಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು 135ನೇ ಜಯಂತ್ಯುತ್ಸವ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನಡೆಸಲು ಭಕ್ತರು ಕೈಜೋಡಿಸಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, 109 ವರ್ಷ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಗಂಧದಂತೆ ಬದುಕು ಸವೆಸಿ ಗಡಿ ಭಾಗಕ್ಕೆ ನೀಡಿದ ಕೊಡುಗೆ ಅಪಾರ ಎಂದು ಸ್ಮರಿಸಿದರು.

ಪೂಜ್ಯರ ಜನಪರ ಮತ್ತು ಜೀವಪರ ಕಾರ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಪ್ರತಿವರ್ಷ ಜಯಂತ್ಯುತ್ಸವ ಸಡಗರ, ಸಂಭ್ರಮದಿಂದ ನಡೆಸಲಾಗುತ್ತಿದೆ. ಈ ಸಲವೂ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಸಾಧಕರನ್ನು ಆಮಂತ್ರಿಸಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ನೇತೃತ್ವ ವಹಿಸಿದ್ದ ಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಹಿರಿಯ ಪೂಜ್ಯರ ಜಯಂತಿ ಎಂದರೆ ಮಾನವೀಯ ಮೌಲ್ಯದ ಕಾರ್ಯಕ್ರಮ ಆಚರಿಸಿದಂತೆ. ಬಸವಣ್ಣನವರ ತತ್ವ, ಸಿದ್ಧಾಂತ ಪೂಜ್ಯರು ಜೀವನದುದ್ದಕ್ಕೂ ಕಡ್ಡಾಯವಾಗಿ ಪಾಲಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದರು ಎಂದರು.

ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಜಯಂತ್ಯುತ್ಸವದಲ್ಲಿ ನಾಡಿನ ಮಠಾಧೀಶರು, ಸಾಹಿತಿಗಳು, ರಾಜಕೀಯ ಗಣ್ಯರು, ಸಾಧಕರು ಭಾಗವಹಿಸಲಿದ್ದಾರೆ. ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶೋಭೆ ತರಬೇಕು ಎಂದರು.

ರಜಾಕಾರರ ಹಾವಳಿಯಲ್ಲಿ ಶ್ರೀಗಳು ಶಿಕ್ಷಣ, ಕನ್ನಡ, ವಚನ ಸಾಹಿತ್ಯ ಹಾಗೂ ಗಡಿಭಾಗದ ರಕ್ಷಣೆಗೆ ಮಾಡಿದ ಹೋರಾಟ ಅವಿಸ್ಮರಣೀಯ. ಅಂಥ ಪೂಜ್ಯರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಬಸವಲಿಂಗ ದೇವರು ಸಮ್ಮುಖ ವಹಿಸಿದ್ದರು. ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ವಿಶ್ವನಾಥಪ್ಪ ಬಿರಾದಾರ್, ಸುಭಾಷ ಕಾರಾಮುಂಗೆ, ಅಶೋಕ ಬಾವಗೆ, ಸಂಗಮೇಶ ಹುಣಜೆ ಮದಕಟ್ಟಿ, ಕುಪೇಂದ್ರ ಜಗಶೆಟ್ಟಿ, ಮೋಹನರಡ್ಡಿ, ಹಣಮಂತ ಕಾರಾಮುಂಗೆ, ಸಂತೋಷ ಬಿಜಿ ಪಾಟೀಲ್, ಮಲ್ಲಮ್ಮ ನಾಗನಕೇರೆ, ಮಹಾನಂದಾ ಮಾಶೆಟ್ಟೆ, ರಾಜೇಶ್ವರಿ ವಂಕೆ ಇತರರಿದ್ದರು. ವೀರಣ್ಣ ಕುಂಬಾರ ವಚನ ಪಾರ್ಥನೆ ನಡೆಸಿಕೊಟ್ಟರು. ಶಶಿಧರ ಕೋಸಂಬೆ ಸ್ವಾಗತಿಸಿದರು. ರಾಜು ಜುಬರೆ ನಿರೂಪಣೆ ಮಾಡಿದರು.

ವಿವಿಧ ಕಾರ್ಯಕ್ರಮ

ಪಟ್ಟದ್ದೇವರು ಜಯಂತ್ಯುತ್ಸವ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪೀಠಾಪತಿ ಶ್ರೀ ಗುರುಬಸವ ಪಟ್ಟದ್ದೇವರು ತಿಳಿಸಿದರು. ಡಿ.12ರಂದು ಕಮಲನಗರದಿಂದ ಭಾಲ್ಕಿವರೆಗೆ ಪಾದಯಾತ್ರೆ, 14ರಂದು ಪ್ರವಚನ ಉದ್ಘಾಟನೆ, 20, 21ರಂದು ಮ್ಯಾರಥಾನ್, 22ರಂದು ಹಿರೇಮಠ ಸಂಸ್ಥಾನದಿಂದ ಪ್ರಭಾತ್ -ೇರಿ ನಂತರ ಚನ್ನಬಸವಾಶ್ರಮದಲ್ಲಿ ಷಟಸ್ಥಲ ಧ್ವಜರೋಹಣ, ತೊಟ್ಟಿಲೋತ್ಸವ, ಪುಸ್ತಕ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ, ಜಾನಪದ ಗಾಯನ, ಭಾಷಣ, ವೇಷಭೂಷಣ ಸ್ಪರ್ಧೆ, ಸಮಾರೋಪ ಮತ್ತು ಮಹಾಕ್ರಾಂತಿ ನಾಟಕ ಪ್ರದರ್ಶನದೊಂದಿಗೆ ಜಯಂತ್ಯುತ್ಸವ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net