ಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಿ

Sharanu Salagar
Published on

ಬಸವಕಲ್ಯಾಣ: ಬಸವಾದಿ ಶರಣರ ಕರ್ಮಭೂಮಿ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಶಾಸಕ ಶರಣು ಸಲಗರ ಒತ್ತಾಯಿಸಿದರು.

ಬೆಳಗಾವಿ ಸುವರ್ಣಸೌಧದಲ್ಲಿ ಸೋಮವಾರ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿ, ಯುವ ಸಮೂಹ ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ ವಚನ ಸಾಹಿತ್ಯ ತತ್ವಗಳ ಕುರಿತು ಜಾಗೃತಿ ಮೂಡಿಸಿ ಉತ್ತಮ ಜೀವನ ರೂಪಿಸುವ ನಿಟ್ಟಿನಲ್ಲಿ ವಚನ ವಿವಿ ಸ್ಥಾಪಿಸುವುದು ಅಗತ್ಯವಾಗಿದೆ ಎಂದರು.

ಬಸವಣ್ಣನವರ ಮೇಲಿನ ಗೌರವದಿಂದ ಹಿಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ 200 ಕೋಟಿ ಅನುದಾನ ನೀಡಿ ನೂತನ ಅನುಭವ ಮಂಟಪ ಕಾಮಗಾರಿಗೆ ಚಾಲನೆ ನೀಡಿದರು. ಈಗಿನ ಸರ್ಕಾರ ಕೆಲಸ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಪ್ರಜಾಪ್ರಭುತ್ವ ತತ್ವದ ಮೇಲೆ ಸಮಸಮಾಜ ನಿರ್ಮಾಣ ಹಾಗೂ ಮಹಿಳೆಯರಿಗೆ ಸಮಾನ ಅವಕಾಶ ಕೊಟ್ಟ ಬಸವಣ್ಣನವರ ಕುರಿತು ಅರಿಯಲು ನಮಗೆ ಬಹಳ ವಿಳಂಬವಾಯಿತು. ಜಗತ್ತಿನಾದ್ಯಂತ ಪ್ರಚಾರ ಮಾಡಲು ಸಹ ಹಿನ್ನಡೆಯಾಗಿದೆ ಎಂದು ಹೇಳಿದರು.

ಐದು ದಶಕದ ಹಿಂದೆ ಬಸವ ಜಯಂತಿ ಗೊತ್ತಿರದ ಸಮಯದಲ್ಲಿ ಆಕಳಿಗೆ ಪೂಜಿಸಿ ಕಾರ್ಯಕ್ರಮ ಮಾಡುತ್ತಿದ್ದರು. ಹರ್ಡೇಕರ್ ಮಂಜಪ್ಪ ಮೊದಲ ಬಾರಿಗೆ ಬಸವ ಜಯಂತಿ ಆಚರಣೆ ಆರಂಭಿಸಿದರು. ಕಾಯಕವೇ ಕೈಲಾಸ ತತ್ವವನ್ನು ಜಗತ್ತಿಗೆ ಮೊದಲು ನೀಡಿದ್ದು ಬಸವಣ್ಣ ಎಂದರು.

ಬಸವಣ್ಣನವರಿಂದ ಪ್ರೇರಿತನಾಗಿ ಹೊಸ ಸಂಸತ್ ಗೆ ಭಾರತ ಮಂಟಪ ಎಂದು ನಾಮಕರಣ ಮಾಡಿರುವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೀಗೆ ಬಸವಣ್ಣನವರ ಕುರಿತು ಹಲವರು ಪ್ರೇರಿತರಾಗಿದ್ದಾರೆ. ಸುವರ್ಣಸೌಧದಲ್ಲಿ ಅನುಭವ ಮಂಟಪದ ಬೃಹತ್ ತೈಲವರ್ಣ ಚಿತ್ರ ಅನಾವರಣಗೊಳಿಸಿದ್ದು ಖುಷಿ ತಂದಿದೆ. ಸರ್ಕಾರದ ಈ ಕಾರ್ಯಕ್ಕೆ ಅಭಿನಂದಿಸುವೆ ಎಂದು ಹೇಳಿದರು.

ಜಗತ್ತಿನಲ್ಲಿ ಬಸವಣ್ಣನವರಿಗೆ ಸರಿಸಮಾನರು ಯಾರೂ ಇಲ್ಲ. ಅವರ ವ್ಯಕ್ತಿತ್ವದಂತೆ ಹಿಂದೆಯೂ ಇದ್ದಿಲ್ಲ, ಮುಂದೆಯೂ ಜನಿಸಲ್ಲ. ಬಸವ ತತ್ವ ಹಾಗೂ ವಚನ ಸಾಹಿತ್ಯವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net