

ಬೀದರ್: ನಗರದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದು ಜಾಗೃತಿ ಸಮಾವೇಶಕ್ಕೆ ನಿರ್ಬಂಧ ಹೇರಿರುವುದಕ್ಕೆ ಸಿಡಿದೆದ್ದ ಹಿಂದು ರಾಷ್ಟ್ರೀಯ ಜಾಗರಣ ಸಮಿತಿ, ಜಿಲ್ಲಾಡಳಿತ ಕ್ರಮದ ವಿರುದ್ಧ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ.
ಸಾಯಿ ಸ್ಕೂಲ್ ಆವರಣದಲ್ಲಿ ಸಂಜೆ 4ಕ್ಕೆ ನಡೆಯಬೇಕಿದ್ದ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ದಿಢೀರ್ ನಿಷೇಧ ಹೇರಿ ಕಾರ್ಯಕ್ರಮ ರದ್ದುಪಡಿಸುವ ಜತೆಗೆ ಹೈದರಾಬಾದ್ ನ ಮಾಧವಿ ಲತಾ, ಗುಜರಾತ್ನ ಕಾಜಲ್ ಹಿಂದುಸ್ತಾನಿ ಹಾಗೂ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಜಿಲ್ಲೆಗೆ ಬರದಂತೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿರುವುದಕ್ಕೆ ಸಮಿತಿ ಪ್ರಮುಖರೂ ಆದ ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಧವಿ ಲತಾ ಅವರು ಒಂದು ಕೋಮಿಗೆ ಗುರಿಯಾಗಿಸಿ ಭಾಷಣ ಮಾಡಿದ್ದು, ಕಾಜಲ್ ಅವರು ಗುಜರಾತ್ ನಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡಿದ್ದರು. ಮುತಾಲಿಕ್ ಪ್ರಚೋದನಕಾರಿ ಭಾಷಣ ಮಾಡುತ್ತಾರೆ ಎಂಬ ನೆಪವೊಡ್ಡಿ ಮೂವರನ್ನು ಜಿಲ್ಲೆಗೆ ಪ್ರವೇಶಿಸದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದನ್ನು ಖಂಡಿಸಿದರು.
ಸಮಾವೇಶಕ್ಕಾಗಿ ಈಗಾಗಲೇ ಲಕ್ಷಾಂತರ ರೂ. ಸಂಗ್ರಹಿಸಿ ಪೆಂಡಾಲ್, ಬೃಹತ್ ವೇದಿಕೆ ಸೇರಿ ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿದೆ. ದಿಢೀರ್ ರದ್ದುಪಡಿಸಿದ್ದರಿಂದ ಅಪಾರ ಹಣದ ನಷ್ಟ ಭರಿಸುವವರು ಯಾರು? ಮೂವರನ್ನು ಬರದಂತೆ ಜಿಲ್ಲಾಡಳಿತ ತಡೆಯಬಹುದಾಗಿತ್ತು. ಆದರೆ ಇಡೀ ಕಾರ್ಯಕ್ರಮ ಸ್ಥಳದಲ್ಲಿ 144 ಸೆಕ್ಷನ್ ಹಾಕಲಾಗಿದೆ. ಹಿಂದುಸ್ತಾನ ಭೂಮಿಯಲ್ಲಿ ಹಿಂದುಗಳ ದಮನ ಮಾಡಲು ಹೊರಟಿರುವ ಜಿಲ್ಲಾಡಳಿತ ವಿರುದ್ಧ ಹೈಕೋಟ್೯ ನಲ್ಲಿ ದಾವೆ ಹೂಡಿ ನಷ್ಟವನ್ನು ವಸೂಲಿ ಮಾಡಿಕೊಡಲು ಕೋರುವುದಾಗಿ ಹೇಳಿದರು.
ಈಚೆಗೆ ಇದೇ ಮೈದಾನದಲ್ಲಿ ಬೇರೆ ಸಮುದಾಯದವರು ಮೂರು ದಿನ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದರು. ಆಗ ಜಿಲ್ಲಾಡಳಿತ ನಿದ್ರೆಗೆ ಜಾರಿತ್ತೆ? ಕಾರ್ಯಕ್ರಮ ನಿಷೇಧ ಕುರಿತು ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಶಾಸಕರ ಮೂಲಕ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಲಾಗುವುದು. ಬರುವ ದಿನಗಳಲ್ಲಿ ಕಾರ್ಯಕ್ರಮವನ್ನು ನ್ಯಾಯಾಲಯ ಆದೇಶ ಪಡೆದು ಆಯೋಜಿಸುವುದಾಗಿ ಠಾಕೂರ್ ತಿಳಿಸಿದರು.
ಬಹುಸಂಖ್ಯಾತ ಹಿಂದು ಸಮುದಾಯದ ಪ್ರಮುಖ ಕಾರ್ಯಕ್ರಮವಾದ ಸಮಾವೇಶ ನಿಷೇಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಹಾಡಹಗಲೆ ಕಗ್ಗೊಲೆ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಇನ್ಮುಂದೆ ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಕಳೆದುಕೊಂಡಿದೆ ಎಂದು ದೂರಿದ್ದಾರೆ.
ಸಮಿತಿ ಅಧ್ಯಕ್ಷ ಶಂಕ್ರೆಪ್ಪ ಪಾಟೀಲ್, ಪ್ರಮುಖರಾದ ಸೋಮಶೇಖರ ಪಾಟೀಲ್ ಗಾದಗಿ, ರಾಮಕೃಷ್ಣನ್ ಸಾಳೆ, ಬಸವರಾಜ ಸ್ವಾಮಿ ಇತರರಿದ್ದರು.