

ಬಸವಕಲ್ಯಾಣ: ಪ್ರಸ್ತುತ ಎಲ್ಲೆಡೆ ನಡೆಯುತ್ತಿರುವ ವಿವಿಧ ರೀತಿಯ ಅಪರಾಧಗಳಲ್ಲಿ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಬೆಂಗಳೂರಿನ ಸಿಐಡಿ ವಿಭಾಗದ ಶ್ರೀನಿವಾಸ ಬೇಸರ ವ್ಯಕ್ತಪಡಿಸಿದರು.
ನಗರದ ಎಸ್ಎಸ್ಕೆ ಬಸವೇಶ್ವರ ಕಾಲೇಜಿನಲ್ಲಿ ಆರ್ಥಿಕ ಜಾಗೃತಿ ಅಭಿಯಾನದಡಿ ಆಯೋಜಿಸಿದ್ದ ಧನ ಸುರಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಿಜಿಟಲ್ ಅಪರಾಧಗಳು ಹೆಚ್ಚಾಗುತ್ತಿದ್ದು, ಇಲ್ಲಿಯೂ ಯುವಕರ ಪಾಲು ಹೆಚ್ಚು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಬಸವರಾಜ ಎವಲೆ ಮಾತನಾಡಿ, ಇಂದಿನ ಕಾಲಮಾನದಲ್ಲಿ ಅನೇಕ ಆರ್ಥಿಕ ವಂಚನೆಗಳಾಗುತ್ತಿದ್ದು, ಅದರಲ್ಲೂ ಡಿಜಿಟಲ್ ವಂಚನೆಗಳು ಬಹಳಷ್ಟು. ಇಂಥ ಪ್ರಕರಣಗಳಿಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ. ಅಲ್ಲದೆ ಜನಜಾಗೃತಿ ಮೂಡಿಸುವುದು ಮುಖ್ಯವಾಗಿದೆ ಎಂದು ಹೇಳಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸತೀಶಕುಮಾರ ಗಾಯಕವಾಡ, ಕರಿಬಸಪ್ಪ ಮಾತನಾಡಿದರು. ನಾಗರಾಜ ಸ್ವಾಮಿ, ಕಲ್ಯಾಣಪ್ಪ ನಾವದಗಿ, ಶರಣು ಮಠಪತಿ, ಆನಂದ ಬಿರಾದಾರ್, ಭಾರತಿ ಮಠ, ಸುಮನರಡ್ಡಿ, ಅಶ್ವಿನಿ ಜಲಾದೆ, ಶಿಲ್ಪಾ ಬಿರಾದಾರ್ ಇತರರಿದ್ದರು. ಡಾ.ರಮೇಶ ಕೆ.ಬಿ. ಸ್ವಾಗತಿಸಿದರು. ಪ್ರೊ. ವಿಠೋಬಾ ಡೊಣ್ಣೆ ನಿರೂಪಣೆ ಮಾಡಿದರು. ಮಹಾದೇವ ಡಿ. ವಂದಿಸಿದರು. ಸಿಐಡಿ, ಸಿಎಫ್ಎಲ್ಬಿಸಿ ಹಾಗೂ ಆರ್ಬಿಐ ವತಿಯಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.