

ಬೀದರ್: ವಿಜ್ಞಾನ ತಂತ್ರಜ್ಞಾನದ ನಾಗಾಲೋಟದಲ್ಲಿ ವಾಟ್ಸ್ಆ್ಯಪ್, ಫೇಸ್ಬುಕ್ನಂಥ ಸಾಮಾಜಿಕ ಜಾಲತಾಣಗಳ ದಾಸರಾಗಿರುವ ಯುವ ಜನರ ಮನಸ್ಸು ನಿಯಂತ್ರಿಸುವ ಶಕ್ತಿ ಹರಿದಾಸ ಸಾಹಿತ್ಯಕ್ಕಿದೆ ಎಂದು ಶ್ರೀ ಸಿದ್ದರಾಮೇಶ್ವರ ಆಯುರ್ವೇದ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಮಮತಾ ಎಚ್.ಎಸ್. ಹೇಳಿದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಡಿ ನಗರದಲ್ಲಿ ಏರ್ಪಡಿಸಿದ್ದ ಕನಕದಾಸರ ಜೀವನ ಮತ್ತು ಸಾಮಾಜಿಕ ಮೌಲ್ಯಗಳು ಉಪನ್ಯಾಸ ಮತ್ತು ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಹರಿದಾಸ ಸಾಹಿತ್ಯದ ಅಧ್ಯಯನ ಮತ್ತು ಅನುಕರಣೆಯಿಂದ ಸಮೃದ್ಧ ಬದುಕು ರೂಪಿಸಿಕೊಳ್ಳಬಹುದು ಎಂದರು.
ಕನ್ನಡಕ್ಕೆ ಅಮೂಲ್ಯ ಕಾಣಿಕೆ ನೀಡಿದ ಹರಿದಾಸ ಸಾಹಿತ್ಯದಲ್ಲಿ ತನು ಮನ ಶೋಸಿ ಬಾಳು ಬೆಳಗುವ ಮಹತ್ವದ ಸಂದೇಶಗಳು ಅಡಗಿವೆ. ಮನುಷ್ಯನ ಹೀನಗುಣಗಳನ್ನು ಹೋಗಲಾಡಿಸಿ ವಿಶ್ವಮಾನವನಂತೆ ಬಾಳಲು ಪ್ರೇರಣೆ ನೀಡುವ ದಿವ್ಯ ಔಷಧಗಳಿವೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಸಹಾಯಕ ಪ್ರಾಧ್ಯಾಪಕ ಡಾ.ಭೀಮಶಾ ಕೆ.ಬಿ., ಕನಕದಾಸರು ಕೀರ್ತನಕಾರ ಮಾತ್ರವಲ್ಲ, ಮಹಾ ಕವಿಯೂ ಹೌದು. ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಜಾತಿ ತಾರತಮ್ಯ ತೊಲಗಿಸಿ ಸಮಾನತೆ, ಭ್ರಾತೃತ್ವ ಬೆಸೆದು ಸಮ ಸಮಾಜ ಕಟ್ಟುವ ಸಾಹಿತ್ಯ ದೀಪ್ತಿ ನೀಡಿದ್ದಾರೆ. ಅವರ ಜೀವನ ಮತ್ತು ಸಾಹಿತ್ಯ ಅನುಕರಣೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಕಾಒರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಮನೋಜಕುಮಾರ ಮಾತನಾಡಿ, ಅಧ್ಯಾತ್ಮದ ಅನುಭವ ಅಭಿವ್ಯಕ್ತಿಯಾಗಿ ಹರಿದಾಸ ಸಾಹಿತ್ಯ ಮೂಡಿಬಂದಿದೆ. ಹರಿದಾಸರು ಭಕ್ತಿ ಮಾರ್ಗದಲ್ಲಿ ಜನಾಂದೋಲನ ಮಾಡಿದ್ದಾರೆ. ಸಮಾಜಮುಖಿ ಚಿಂತನೆಯ ಕೀರ್ತನೆಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಹೇಳಿದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಂದ್ರ ಲಂಜವಾಡಕರ್ ಮಾತನಾಡಿ, ಹರಿದಾಸರ ಚಿಂತನೆಗಳು ಹೊಸ ಆಯಾಮಗಳಲ್ಲಿ ಅಧ್ಯಯನ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ದಾಸ ಸಾಹಿತ್ಯದ ಚಿಂತನಾಕೂಟ ಏರ್ಪಡಿಸಿ ಪ್ರಚಾರ, ಪ್ರಚಾರ ಮಾಡಲಾಗುತ್ತಿದೆ ಎಂದರು.
ಮಹೇಶ ಮೈಲೂರಕರ್, ಶ್ರುತಿ, ಭವಾನಿ ಕೀರ್ತನ ಗಾಯನ ಮಾಡಿದರು. ಪೂಣರ್ಿಮಾ ಶೆಂಬೆಳ್ಳಿ ಸ್ವಾಗತಿಸಿದರು. ಪ್ರೊ.ಶ್ರೀಕಾಂತ ಪಾಟೀಲ್ ನಿರೂಪಣೆ ಮಾಡಿದರು. ಪಾರ್ವತಿ ಮೇತ್ರೆ ವಂದಿಸಿದರು.