

ಬೀದರ್: ಒತ್ತಡದ ವೃತಿಯಲ್ಲಿರುವವರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಶರಣಪ್ಪ ಪಾಟೀಲ್ ಹೇಳಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರ ದಿನಾಚರಣೆ ನಿಮಿತ್ತ ಜಿಲ್ಲಾ ವಕೀಲರ ಸಂಘ, ಕಾನೂನು ಸೇವೆಗಳ ಪ್ರಾಕಾರ ಹಾಗೂ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಕಷ್ಟದ ಸಂದರ್ಭದಲ್ಲಿ ರಕ್ತದಾನ ಮಾಡುವುದು ಶ್ರೇಷ್ಠ ಕಾರ್ಯ. ಯುವಜನರು ಹೆಚ್ಚಾಗಿ ರಕ್ತದಾನ ಮಾಡಬೇಕು ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ ಎಂ. ಆನಂದಶೆಟ್ಟಿ ಉದ್ಘಾಟಿಸಿ ಮಾತನಾಡಿದರು. ನ್ಯಾಯಾಧೀಶರಾದ ಸಚಿನ್ ಕೌಶಿಕ್ ಆರ್.ಎನ್., ಬಿ.ಕೆ. ಕೋಮಲಾ, ಪ್ರಕಾಶ್ ಎ. ಬನಸೋಡೆ, ರಾಘವೇಂದ್ರ, ಶ್ರೀದೇವಿ ಗರಬಾರೆ, ಕಾಡಪ್ಪ ಹುಕ್ಕೇರಿ, ರಾಮಮೂರ್ತಿ ಎನ್., ಎಂ.ಡಿ. ಶೈಜ್ ಚೌತಾಯಿ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಗುಂಡರಡ್ಡಿ ಗುಡಾಡಿ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಿರಾದಾರ್, ಜಂಟಿ ಕಾರ್ಯದರ್ಶಿ ಶಿಲ್ಪಾ ಪಾಟೀಲ್, ಖಚಾಂಚಿ ಪ್ಯಾರುಸಾಬ್ ಸೇರಿದಂತೆ ವಕೀಲರು ಭಾಗವಹಿಸಿದರು.
ಯಶಸ್ವಿಯಾಗಿ 20 ವರ್ಷಗಳ ಕಾಲ ವಕೀಲ ವೃತಿ ಪೂರೈಸಿದ 20 ನ್ಯಾಯವಾದಿಗಳಿಗೆ ಕಾರ್ಯಕ್ರಮದಲ್ಲಿ ವಕೀಲರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. 16 ಮಂದಿ ನ್ಯಾಯವಾದಿಗಳು ರಕ್ತದಾನ ಮಾಡಿದರು.