ನಿವೃತ್ತಿ ನಂತರ ಹೊಸ ಜೀವನ ಆರಂಭ

Kotgyal
Published on

ಬೀದರ್: ನಿವೃತ್ತಿ ನಂತರ ಅನೇಕರು ಖಿನ್ನತೆಗೆ ಒಳಗಾಗುತ್ತಾರೆ. ಜೀವನವೇ ಮುಗಿಯಿತು ಅಂದುಕೊಳ್ಳುತ್ತಾರೆ. ಆದರೆ, ಕ್ರೀಯಾಶೀಲರಾದವರಿಗೆ ನಿವೃತ್ತಿ ಹೊಸ ಜೀವನದ ಆರಂಭ ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.

ಭಾಲ್ಕಿ ತಾಲ್ಲೂಕಿನ ಕೊಟಗ್ಯಾಳ ಗ್ರಾಮದಲ್ಲಿ ನಾಗರಿಕ ಸಮಿತಿ ವತಿಯಿಂದ ಈಚೆಗೆ ನಡೆದ ನಿವೃತ್ತ ಶಿಕ್ಷಕ ಧನರಾಜ ಕರಂಜೆ ಅವರ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ನಿವೃತ್ತರಾದವರಿಗೆ ಯಾವುದೇ ನಿರ್ಬಂಧನೆಗಳಿರುವುದಿಲ್ಲ. ಅವರು ಏನೇ ನಿರ್ಣಯ ಕೈಗೊಳ್ಳಲು ಸ್ವತಂತ್ರರಾಗಿರುತ್ತಾರೆ ಎಂದು ಹೇಳಿದರು.

ನಿವೃತ್ತರು ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿವೃತ್ತಿ ಜೀವನವನ್ನು ಸಾರ್ಥಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಉದ್ಘಾಟನೆ ನೆರವೇರಿಸಿದ ಬೀದರ್‍ನ ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಮಾತನಾಡಿ, ಆಧುನಿಕ ಜಗತ್ತಿನ ಬೆಳವಣಿಗೆಯ ಹಿಂದೆ ಶಿಕ್ಷಣದ ಪಾತ್ರ ಬಹು ದೊಡ್ಡದಾಗಿದೆ ಎಂದು ಹೇಳಿದರು.

ಶಿಕ್ಷಕ ವೃತ್ತಿ ಭೂಮಿ ಮೇಲೆ ಮತ್ಸರ ಇಲ್ಲದ ವೃತ್ತಿ. ಮಕ್ಕಳ ಏಳಿಗೆಯಲ್ಲೇ ತಮ್ಮ ಏಳಿಗೆ ಕಾಣುವವರೇ ನಿಜವಾದ ಶಿಕ್ಷಕರು ಎಂದರು.

ಧನರಾಜ ಕರಂಜೆ ಶಿಸ್ತು, ಸಮಯ ಪ್ರಜ್ಞೆ, ವೃತ್ತಿ ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಶಿಕ್ಷಕ ಹುದ್ದೆಗೆ ಘನತೆ ತಂದುಕೊಟ್ಟಿದ್ದಾರೆ ಎಂದು ನುಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರೇಮಸಾಗರ್ ದಾಂಡೇಕರ್ ಮಾತನಾಡಿ, ಧನರಾಜ ಕರಂಜೆ ಆದರ್ಶ ಶಿಕ್ಷಕರು. ಶಿಷ್ಯರ ಉನ್ನತಿಯಲ್ಲೇ ಸಂತೃಪ್ತಿ ಕಂಡವರು. ನನ್ನಂಥ ಅನೇಕರು ವಿವಿಧ ಉನ್ನತ ಹುದ್ದೆ ಅಲಂಕರಿಸಲು ಅವರ ಪ್ರೇರಣೆಯೇ ಕಾರಣ ಎಂದು ಹೇಳಿದರು.

ಧನರಾಜ ಕರಂಜೆ ಹಾಗೂ ಸರಸ್ವತಿ ಕರಂಜೆ ದಂಪತಿಯನ್ನು ಅಭಿನಂದಿಸಲಾಯಿತು.

ಠಾಣಾಕುಶನೂರದ ನೂತನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶಿವಶರಣಪ್ಪ ವಲ್ಲೇಪುರೆ ಮಾತನಾಡಿದರು. ಅಲಿಯಂಬರದ ವೀರನಾಥ ಸಂಸ್ಥಾನದ ಬಂಡು ಮಹಾರಾಜ, ಬಾಬುರಾವ್ ಮುತ್ತ್ಯಾ ಸಮ್ಮುಖ ವಹಿಸಿದ್ದರು. ಠಾಣಾಕುಶನೂರದ ಭಾರತೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶರಣಪ್ಪ ಪಾಸ್ಟರ್, ಭಾರತೀಯ ಬಸವ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಸಂಜುಕುಮಾರ ಜುಮ್ಮಾ, ಉದ್ಯಮಿ ಸಿದ್ಧಾರೆಡ್ಡಿ ನಾಗೂರಾ, ಪ್ರಮುಖರಾದ ಮಹೇಶ ಬಿರಾದಾರ, ಮಲ್ಲಿಕಾರ್ಜುನ ಕರಂಜೆ, ಬಿ.ಎಸ್. ಮಾಲಿಪಾಟೀಲ, ಸೂರ್ಯಕಾಂತ ಬಿರಾದಾರ ಉಪಸ್ಥಿತರಿದ್ದರು.

ತುಮಕೂರಿನ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ ಸ್ವಾಗತಿಸಿದರು. ಅನಿಲಕುಮಾರ ಪೊಲೀಸ್ ಪಾಟೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net