

ಬೀದರ್: ಇಲ್ಲಿಯ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಗೊಂಡು 50 ವರ್ಷ ಪೂರೈಸಿದ ಪ್ರಯುಕ್ತ ಕಾಲೇಜಿನಲ್ಲಿ ಸುವರ್ಣ ಸಂಭ್ರಮ ಅಂಗವಾಗಿ ಮಂಗಳವಾರ ಹಾಗೂ ಬುಧವಾರ ಅಂತರ ಕಾಲೇಜುಮಟ್ಟದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆದವು.
ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಸಾಂಸ್ಕøತಿಕ ವಿಭಾಗದಲ್ಲಿ ನೃತ್ಯ, ರಂಗೋಲಿ, ಪೇಂಟಿಂಗ್, ವೇಷ ಭೂಷಣ, ಗಾಯನ, ಒಲೆ ರಹಿತ ಅಡುಗೆ ತಯಾರಿಕೆ, ಸಾಕ್ಷ್ಯಚಿತ್ರ ನಿರ್ಮಾಣ, ನಾಟಕ, ಕ್ರೀಡಾ ವಿಭಾಗದಲ್ಲಿ ವಾಲಿಬಾಲ್, ಚೆಸ್, ಬಾಡ್ಮಿಂಟನ್, ಟೇಬಲ್ ಟೆನಿಸ್ ಮತ್ತಿತರ ಸ್ಪರ್ಧೆಗಳು ಜರುಗಿದವು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಾಚಾರ್ಯೆ ಡಾ. ಜಯಶ್ರೀ ಪ್ರಭಾ ಅವರು, ವಿದ್ಯಾರ್ಥಿಗಳು ಪಾಠದ ಜತೆಗೆ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಒಲವು ಸಹ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರರಾದ ಹೊನ್ನಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರವೀಣಕುಮಾರ ಹಾಗೂ ರಾಬರ್ಟ್ ಡೇವಿಡ್ ಜಂಟಿಯಾಗಿ ಉದ್ಘಾಟಿಸಿದರು. ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಉಪಸ್ಥಿತರಿದ್ದರು.
ಕಾಲೇಜಿನ ಸಾಂಸ್ಕøತಿಕ ಕಾರ್ಯದರ್ಶಿ ಎಲಿಷ ದೇವಿದಾಸ ಸ್ವಾಗತಿಸಿದರು. ಡಾ. ರಾಜಕುಮಾರ ಅಲ್ಲೂರೆ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಬಾಲಸುಬ್ರಹ್ಮಣ್ಯಂ ವಂದಿಸಿದರು.