

ಬೀದರ್: ಅನುದಾನಿತ ಪದವಿಪೂರ್ವ ಕಾಲೇಜುಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳು ನಗರದಲ್ಲಿ ನಿಯೋಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
2025-26ನೇ ಸಾಲಿನಿಂದ ಅನ್ವಯಿಸುವಂತೆ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಪ್ರತಿ ವಿಭಾಗಕ್ಕೆ ಕನಿಷ್ಠ ದಾಖಲಾತಿ 20ಕ್ಕೆ ನಿಗದಿಪಡಿಸಬೇಕು. ಸರ್ಕಾರದ ಆದೇಶ ಹಿಂಪಡೆದು, ಕಾರ್ಯಭಾರ ಕಡಿಮೆ ಇರುವ ಕಾಲೇಜುಗಳ ಉಪನ್ಯಾಸಕರನ್ನು ಕಾರ್ಯಭಾರ ಇರುವ ಸಮೀಪದ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ನಿಯೋಜಿಸಬೇಕು. ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸಬೇಕು. 2006 ರ ನಂತರ ವೇತನ ಅನುದಾನಕ್ಕೆ ಒಳಪಟ್ಟ ಪದವಿಪೂರ್ವ ಕಾಲೇಜುಗಳ ಸಿಬ್ಬಂದಿಗೆ ನಿಶ್ಚಿತ ಪಿಂಚಣಿ ಜಾರಿಗೊಳಿಸಬೇಕು ಎಂದು ಬೇಡಿಕೆ ಮಂಡಿಸಿದರು.
ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಬೇಕು ಎಂದು ಮನವಿ ಮಾಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಕೆ. ಪಾಟೀಲ ನಿಯೋಗದ ಮುಂದಾಳತ್ವ ವಹಿಸಿದ್ದರು. ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಪೂಜಾರಿ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಉಮಾಕಾಂತ ಅಲ್ಮಾಜೆ, ಉಪಾಧ್ಯಕ್ಷ ಬಸವರಾಜ ದಿಡಗೆ, ಪ್ರಧಾನ ಕಾರ್ಯದರ್ಶಿ ಬಸವರಾಜ ಎ. ಮಾಲಿಪಾಟೀಲ, ಸಹ ಕಾರ್ಯದರ್ಶಿ ಬಂಡೆಪ್ಪ ಬಿರಾದಾರ, ಕೋಶಾಧ್ಯಕ್ಷ ಬಜರಂಗ ಲೋಹಾರ್ ಇದ್ದರು.