ಹಿಂದು ಜಾಗೃತಿ ಸಮಾವೇಶ 8ಕ್ಕೆ

hindu samavesh
Published on

ಬೀದರ್: ಭಾರತವನ್ನು ಹಿಂದು ರಾಷ್ಟ್ರ ಘೋಷಿಸಬೇಕೆಂಬ ಸಂತರ ಹಾಗೂ ಸನಾತನಿಗಳ ಬೇಡಿಕೆ ಮುಂದಿಟ್ಟುಕೊಂಡು ಹಿಂದು ರಾಷ್ಟ್ರೀಯ ಜಾಗರಣ ಸಮಿತಿ ಡಿ.8ರಂದು ನಗರದ ಸಾಯಿ ಸ್ಕೂಲ್ ಮೈದಾನದಲ್ಲಿ ಬೃಹತ್ ಹಿಂದು ಜಾಗೃತಿ ಸಮಾವೇಶ ಆಯೋಜಿಸಿದೆ ಎಂದು ಜಿಲ್ಲಾಧ್ಯಕ್ಷ ಶಂಕರ ಪಾಟೀಲ್ ಹೇಳಿದರು.

ಕಾರ್ಯಕ್ರಮವನ್ನು ಅದ್ದೂರಿ ಜತೆ ಅರ್ಥಪೂರ್ಣವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದೇಶದ ನಾನಾ ಭಾಗಗಳಿಂದ ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸನಾತನ ಹಿಂದು ಬೋಡ್೯ ಸ್ಥಾಪಿಸಬೇಕು. ನಮ್ಮ ದೇವಸ್ಥಾನದ ಖಜಾನೆ ನಮ್ಮ ಹಕ್ಕು ಯೋಜನೆ ಅಡಿ ಹಿಂದು ದೇವಾಲಯಗಳಿಂದ ಬರುವ ಆದಾಯ ಕೇವಲ ಹಿಂದು ಧರ್ಮ ಕಾರ್ಯಗಳಿಗೆ ಸೀಮಿತಗೊಳಿಸಬೇಕು. ಗೋಹತ್ಯೆ ನಿಷೇಧ ಕಾನೂನು ಕಠಿಣ ರೂಪದಲ್ಲಿ ಜಾರಿಯಾಗಬೇಕು. ದೇವಸ್ಥಾನ, ಮಠ-ಮಂದಿರ ಸೇರಿದಂತೆ ಹಿಂದುಗಳಿಗೆ ಸೇರಿದ ಎಲ್ಲ ಆಸ್ತಿಗಳನ್ನು ವಕ್ಫ್ ನಿಂದ ರಕ್ಷಿಸಿ ಬೋಡ್೯ ರದ್ದುಗೊಳಿಸಬೇಕು, ಲವ್ ಜಿಹಾದ್ ಹಾಗೂ ಮತಾಂತರ ನಿಷೇಧ ಕಾಯ್ದೆ ಸಂಸತ್ನಲ್ಲಿ ಮಂಡಿಸಬೇಕು. ಹಿಂದುಗಳ ಮೇಲಿನ ದೌರ್ಜನ್ಯ ತಡೆದು ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಘೋಷಿಸಬೇಕೆಂದು ಸಮಾವೇಶ ಹಕ್ಕೊತ್ತಾಯ ಮಂಡಿಸಲಿದೆ ಎಂದು ಹೇಳಿದರು.

ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಮಾತನಾಡಿ, ಸಮಾವೇಶದಲ್ಲಿ ಹೈದರಾಬಾದ್ನ ಮಾಧವಿ ಲತಾ, ಗುಜರಾತ್ ಸೌರಾಷ್ಟ್ರದ ಬಹೆನ್ ಕಾಜಲ್, ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ ಪಾಲ್ಗೊಳ್ಳಲಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದುಗಳ ವಿರುದ್ಧದ ಹಿಂಸಾಚಾರ ತಡೆಗೆ ಪ್ರಧಾನಿ ನರೇಂದ್ರ ಮೋದಿ ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ರಾಮಕೃಷ್ಣನ್ ಸಾಳೆ, ಬಸವರಾಜ ಸ್ವಾಮಿ, ಸೋಮಶೇಖರ ಪಾಟೀಲ್ ಗಾದಗಿ ಮಾತನಾಡಿದರು. ನಾಗರಾಜ ನೇಳಗೆ, ಸ್ವಾಮಿದಾಸ ಕೆಂಪೆನೋರ್, ಅಮಿತ್ ಚಿಂಚೋಳೆ ಇತರದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net