ಮತ್ತೆ ಅಧ್ಯಕ್ಷನಾಗುವುದು ಖಚಿತ

Rajendrakumar Gandge
Published on
ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಸತತ ಮೂರನೇ ಬಾರಿಗೆ ಆಯ್ಕೆಯಾಗುವುದು ಖಚಿತ ಎಂದು ಸಂಘದ ಜಿಲ್ಲಾ ಘಟಕದ ಹಾಲಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಿ. 4 ರಂದು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. 66 ನಿರ್ದೇಶಕರು ಹಾಗೂ 6 ತಾಲ್ಲೂಕು ಘಟಕಗಳ ಅಧ್ಯಕ್ಷರು ಸೇರಿ ಒಟ್ಟು 72 ಜನ ಮತ ಚಲಾಯಿಸಲಿದ್ದಾರೆ. ಇವರಲ್ಲಿ 42 ಮಂದಿ ಬೆಂಬಲ ತಮಗಿದೆ ಎಂದು ಹೇಳಿದ್ದಾರೆ.
ಎರಡು ಅವಧಿಗೆ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿದ್ದೇನೆ. ನೌಕರರ ಸಮಸ್ಯೆಗಳ ಪರಿಹಾರಕ್ಕೆ ಶಕ್ತಿಮೀರಿ ಪ್ರಯತ್ನಿಸಿದ್ದೇನೆ. ಇನ್ನೊಂದು ಅವಧಿಗೆ ಅಧ್ಯಕ್ಷನಾಗಿ ಮುಂದುವರಿಯಬೇಕೆಂಬ ಬಯಕೆ ನೌಕರರದ್ದಾಗಿದೆ. ಚುನಾವಣೆಯಲ್ಲಿ ಆಯ್ಕೆಯಾದವರೂ ತಮ್ಮ ಬೆನ್ನಿಗೆ ನಿಂತಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯ ಘಟಕದ ಉಪಾಧ್ಯಕ್ಷನಾಗಿ ಜಿಲ್ಲೆಗೆ ಹೆಸರು ತರುವ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ರಾಜ್ಯ ಘಟಕದ ಅಧ್ಯಕ್ಷ ಷಡಾಕ್ಷರಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಈ ಬಾರಿಯೂ ರಾಜ್ಯ ಘಟಕದಲ್ಲಿ ಒಳ್ಳೆಯ ಸ್ಥಾನ ದೊರಕುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ನಿರ್ದೇಶಕರು ಅಧ್ಯಕ್ಷರನ್ನಾಗಿ ಪುನರಾಯ್ಕೆಗೊಳಿಸಿದರೆ ಎನ್‍ಪಿಎಸ್ ರದ್ದುಪಡಿಸಿ, ಒಪಿಎಸ್ ಮರು ಜಾರಿ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸೇರಿದಂತೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಶ್ರಮಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಈಗಾಗಲೇ ರೂ. 1.5 ಕೋಟಿ ವೆಚ್ಚದಲ್ಲಿ ಬೃಹತ್ ಡೈನಿಂಗ್ ಹಾಲ್ ನಿರ್ಮಾಣ ಹಾಗೂ ಭವನದ ನವೀಕರಣ ಮಾಡಲಾಗಿದೆ. ಬರುವ ದಿನಗಳಲ್ಲಿ ರೂ. 4 ಕೋಟಿ ವೆಚ್ಚದಲ್ಲಿ ಭವನದಲ್ಲಿ ಹವಾ ನಿಯಂತ್ರಣ ವ್ಯವಸ್ಥೆ, ಮುಂಭಾಗದಲ್ಲಿ ಎಲೆವೇಷನ್, 10 ಅತಿಥಿಗಳ ಕೋಣೆ, ಸಭಾ ಭವನ, ತೆರೆದ ಕಲ್ಯಾಣ ಮಂಟಪ ಮೊದಲಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಸಂಘ ಹಾಗೂ ನೌಕರರ ಹಿತಕ್ಕಾಗಿ ನೂತನ ನಿರ್ದೇಶಕರು ಹಾಗೂ ತಾಲ್ಲೂಕು ಅಧ್ಯಕ್ಷರು ತಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net